ಪ್ರೊ ಕಬಡ್ಡಿಗೆ ಹೊಸ ಪ್ರಾಯೋಜಕರು ಲಭ್ಯ
ಹೊಸದಿಲ್ಲಿ, ಮೇ 9: ಚೀನಾದ ಮೊಬೈಲ್ ಕಂಪೆನಿ ವಿವೊ ದೇಶದ ಗ್ರಾಮೀಣ ಕ್ರೀಡೆ ಕಬಡ್ಡಿಯ ಪ್ರಸಿದ್ಧ ಲೀಗ್ ಪ್ರೊ ಕಬಡ್ಡಿಯೊಂದಿಗೆ ಮುಂದಿನ ಐದು ವರ್ಷಗಳ ಅವಧಿಗೆ 46.7 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬೆಳವಣಿಗೆಯಿಂದಾಗಿ ಕಬಡ್ಡಿಗೆ ಭಾರೀ ಉತ್ತೇಜನ ಲಭಿಸಿದಂತಾಗಿದೆ.
ಪ್ರೊ ಕಬಡ್ಡಿ ವೃತ್ತಿಪರ ಕ್ರೀಡಾ ಲೀಗ್‌ಗಳ ಪೈಕಿ ಅತ್ಯಂತ ಜನಪ್ರಿಯವಾಗಿದ್ದು, 2008ರಲ್ಲಿ ಆರಂಭವಾಗಿರುವ ಜನಪ್ರಿಯ ಕ್ರಿಕೆಟ್ ಲೀಗ್ ಐಪಿಎಲ್‌ನಷ್ಟೇ ಪ್ರಸಿದ್ಧ ಪಡೆದಿದೆ.
ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕ್ರಿಕೆಟ್‌ಗೆ ಸಡ್ಡು ಹೊಡೆದಿರುವ ಕಬಡ್ಡಿ ಹೆಚ್ಚು ವೀಕ್ಷಕರನ್ನು ತಲುಪಿತ್ತು.
‘‘ಪ್ರೊ ಕಬಡ್ಡಿ ಉನ್ನತ ಮಟ್ಟಕ್ಕೇರಿದ್ದು, ಈ ಒಪ್ಪಂದ ಅತ್ಯಂತ ಮುಖ್ಯವಾಗಿದೆ. ಭಾರತದ ಅತ್ಯಂತ ಹೆಮ್ಮೆಯ ಲೀಗ್‌ನಲ್ಲಿ ಭಾಗಿಯಾಗಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ’’ ಎಂದು ವಿವೊ ಇಂಡಿಯಾ ಸಿಇಒ ಕೆಂಟ್ ಚೆಂಗ್ ತಿಳಿಸಿದ್ದಾರೆ.
ವಿವೋ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವದ ಬಿಡ್‌ನ್ನು ಗೆದ್ದುಕೊಂಡಿತ್ತು. ಮತ್ತೊಂದು ಚೀನಾದ ಮೊಬೈಲ್ ಕಂಪೆನಿ ಒಪ್ಪೊ ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.