ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಹರ್‌ಪ್ರೀತ್‌ಗೆ ಕಂಚು, ಗುರುಪ್ರೀತ್ ನಿರಾಸೆ
ಹೊಸದಿಲ್ಲಿ, ಮೇ 10: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ದಿನ ಗ್ರಿಕೊ-ರೊಮನ್ ತೂಕ ವಿಭಾಗದಲ್ಲಿ ಭಾರತದ ಹರ್‌ಪ್ರೀತ್ ಸಿಂಗ್ ಅವರು ಕಂಚಿನ ಪದಕ ಜಯಿಸಿದ್ದಾರೆ. ಇತರ ಕುಸ್ತಿಪಟುಗಳು ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಬುಧವಾರ ಇಲ್ಲಿ ಆರಂಭವಾದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಜುಂಜೀ ನಾ ಅವರನ್ನು 3-2 ಅಂತರದಿಂದ ಮಣಿಸಿದ ಹರ್‌ಪ್ರೀತ್ ಕೂಟದಲ್ಲಿ ಸತತ ಎರಡನೆ ಬಾರಿ ಕಂಚಿನ ಪದಕ ಗೆದ್ದುಕೊಂಡರು.
ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದ ಮೊದಲ ಸುತ್ತು ಕೊನೆಗೊಂಡಾಗ ಉಭಯ ಆಟಗಾರರು 1-1 ರಿಂದ ಸಮಬಲ ಸಾಧಿಸಿದರು. ದ್ವಿತೀಯ ಸುತ್ತಿನಲ್ಲಿ ತಿರುಗೇಟು ನೀಡಿದ ಹರ್‌ಪ್ರೀತ್ ಎರಡು ಅಂಕವನ್ನು ಗಳಿಸಿ ಎದುರಾಳಿಯನ್ನು 3-1 ಅಂತರದಿಂದ ಮಣಿಸಿದರು. ಮೊದಲ ದಿನದ ಪಂದ್ಯದಲ್ಲಿ ಹರ್‌ಪ್ರೀತ್ ಭಾರತದ ಪರ ಪದಕದ ಖಾತೆ ತೆರೆದರು. ಇತರ ಕುಸ್ತಿಪಟುಗಳು ಬರಿಗೈಯಲ್ಲಿ ವಾಪಸಾದರು.
ಏಷ್ಯನ್ ಚಾಂಪಿಯನ್‌ಶಿಪ್‌ನ ಮೊದಲ ದಿನ ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಿಗೆ ಯಾವುದೇ ವ್ಯವಸ್ಥೆ ಕಲ್ಪಿಸದ ಕಾರಣ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘‘ನನ್ನ ಮೇಲೆ ಪದಕದ ನಿರೀಕ್ಷೆಯಿದ್ದ ಕಾರಣ ಒತ್ತಡದಲ್ಲಿದ್ದೆ. ಆತಿಥೇಯ ಭಾರತಕ್ಕೆ ಮೊದಲ ದಿನವೇ ಪದಕ ಗೆದ್ದುಕೊಡಲು ಬಯಸಿದ್ದೆ. ತನ್ನ ರಣತಂತ್ರ ಯಶಸ್ವಿಯಾಗಿ ಪದಕ ಗೆದ್ದುಕೊಂಡಿರುವುದಕ್ಕೆ ಸಂತೋಷವಾಗುತ್ತಿದೆ’’ ಎಂದು ಬ್ಯಾಂಕಾಕ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಹರ್‌ಪ್ರೀತ್ ಹೇಳಿದ್ದಾರೆ. ಭಾರತದ ಇನ್ನೋರ್ವ ಸ್ಪರ್ಧಿ ಗುರುಪ್ರೀತ್(75ಕೆಜಿ) ಚೀನಾದ ಬಿನ್ ಯಾಂಗ್ ವಿರುದ್ಧ ಕಂಚಿನ ಪದಕಕ್ಕಾಗಿ ನಡೆದಿದ್ದ ಪಂದ್ಯದಲ್ಲಿ ಕೇವಲ 38 ಸೆಕೆಂಡ್‌ನಲ್ಲಿ 0-8 ರಿಂದ ಸೋತು ನಿರಾಸೆಗೊಳಿಸಿದರು.
ಹರ್‌ಪ್ರೀತ್ ಅರ್ಹತಾ ಸುತ್ತಿನಲ್ಲಿ ಜಪಾನ್‌ನ ಯುಯಾ ಮಯೆಟಾರನ್ನು 2-1 ರಿಂದ ಮಣಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯದ ಕಿಮ್ ವಿರುದ್ಧ ಸೋತಿದ್ದರು. ಕಿಮ್ ಚಿನ್ನದ ಪದಕ ಸುತ್ತಿಗೆ ತಲುಪಿದ ಕಾರಣ ಹರ್‌ಪ್ರೀತ್ ಅದೃಷ್ಟ ಖುಲಾಯಿಸಿತ್ತು.