×
Ad

58 ಕೆಜಿ ವಿಭಾಗ: ಅವಕಾಶ ವಂಚಿತ ಸಾಕ್ಷಿ

Update: 2017-05-10 23:45 IST

ಹೊಸದಿಲ್ಲಿ, ಮೇ 10: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಬುಧವಾರ ಇಲ್ಲಿ ಆರಂಭವಾಗಿದ್ದು, ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಸಾಕ್ಷಿ ಮಲಿಕ್ ತಾನು ಅರ್ಹತೆಗೊಂಡಿರುವ ತೂಕದ ವಿಭಾಗದಲ್ಲಿ ಸ್ಪರ್ಧಿಸಲು ಅಸಮರ್ಥರಾಗಿದ್ದಾರೆ.

2016ರ ರಿಯೋ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದ ಇಬ್ಬರು ಅಥ್ಲೀಟ್‌ಗಳ ಪೈಕಿ ಒಬ್ಬರಾಗಿರುವ ಸಾಕ್ಷಿ 58 ಕೆಜಿ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ಜಯ ಸಾಧಿಸಿದ್ದರು. ಆದರೆ, ಸಾಕ್ಷಿ ತೂಕ ಕಡಿಮೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಭಾರತದ ಕುಸ್ತಿ ಫೆಡರೇಶನ್(ಡಬ್ಲು ಎಫ್‌ಐ) 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

60 ಕೆಜಿ ನ್ಯಾಶನಲ್ ಚಾಂಪಿಯನ್ ಸರಿತಾ ಮೊರ್‌ಗೆ ತೂಕ ಕಡಿಮೆ ಮಾಡಿಕೊಳ್ಳಲು ಸೂಚಿಸಿರುವ ಫೆಡರೇಶನ್ 58 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಲು ಸೂಚಿಸಿದೆ. ಸರಿತಾ ಶುಕ್ರವಾರ ಸ್ಪರ್ಧಿಸಲಿದ್ದಾರೆ. ಅಷ್ಟೊತ್ತಿಗೆ ತೂಕವನ್ನು ಇಳಿಸಿಕೊಳ್ಳಬೇಕಾಗಿದೆ.

  ‘‘ಇಬ್ಬರೂ ಆಟಗಾರ್ತಿಯರು ತಮ್ಮ ತೂಕ ವಿಭಾಗವನ್ನು ಬದಲಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ. ತಮ್ಮ ಕೋಚ್‌ಗೆ ಲಿಖಿತವಾಗಿ ಒಪ್ಪಿಗೆ ಪತ್ರ ನೀಡಿದ್ದು,ಯಾವುದೇ ಸಮಸ್ಯೆಯಿಲ್ಲ’’ ಎಂದು ಕುಸ್ತಿ ಫೆಡರೇಶನ್ ಹೇಳಿದೆ.

‘‘ಎ.2 ರಂದು ವಿವಾಹವಾಗಿರುವ ಸಾಕ್ಷಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಕುಸ್ತಿ ಟ್ರಯಲ್‌ನ್ನು ಎ.30 ರಿಂದ ಮೇ 5ಕ್ಕೆ ಮುಂದೂಡುವಂತೆ ವಿನಂತಿಸಿದ್ದರು. ಸಾಕ್ಷಿ ಪದಕ ಜಯಿಸಬಲ್ಲ ಕುಸ್ತಿಪಟು. ಅವರಿಗಾಗಿ ಕೆಲವು ಬದಲಾವಣೆಮಾಡಲಾಗಿದೆ. ಏಷ್ಯಾ ಕೂಟ ಸ್ವದೇಶದಲ್ಲಿ ನಡೆಯುತ್ತಿರುವ ಕಾರಣ ಪದಕ ಗೆಲ್ಲುವುದು ಅತ್ಯಂತ ಮುಖ್ಯವಾಗಿದೆ’’ ಎಂದು ಕುಸ್ತಿ ಫೆಡರೇಶನ್ ಕಾರ್ಯದರ್ಶಿ ವಿನೋದ್ ಥೋಮರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News