ಲೋಟದಲ್ಲಿ ಮೂತ್ರ ಮಾಡಲು ಹೇಳಿದರು : ಯುನೈಟೆಡ್ ಏರ್‌ಲೈನ್ಸ್ ಸಿಬ್ಬಂದಿ ವಿರುದ್ಧ ಮಹಿಳಾ ಪ್ರಯಾಣಿಕೆ ದೂರು

Update: 2017-05-11 14:38 GMT

ಕ್ಯಾನ್ಸಸ್ ಸಿಟಿ (ಅಮೆರಿಕ), ಮೇ 11: ಕಳೆದ ತಿಂಗಳು ತಾನು ಹೂಸ್ಟನ್‌ನಿಂದ ಮಿಸೂರಿ ರಾಜ್ಯದ ಕ್ಯಾನ್ಸಸ್ ಸಿಟಿಗೆ ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಲೋಟದಲ್ಲಿ ಮೂತ್ರ ಮಾಡುವಂತೆ ವಿಮಾನ ಸಿಬ್ಬಂದಿ ತನಗೆ ಹೇಳಿದ್ದರು ಎಂದು ಮಹಿಳಾ ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.

ಆದಾಗ್ಯೂ, ತನ್ನ ಸಿಬ್ಬಂದಿ ಮಹಿಳಾ ಪ್ರಯಾಣಿಕೆಗೆ ಲೋಟದಲ್ಲಿ ಮೂತ್ರ ಮಾಡುವಂತೆ ಹೇಳಿಲ್ಲ ಎಂದು ಏರ್‌ಲೈನ್ಸ್ ಹೇಳಿದೆ.

ತಾನು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ತನಗೆ ಒಮ್ಮೆಲೆ ಮೂತ್ರ ಮಾಡಬೇಕಾದ ತುರ್ತು ಉಂಟಾಯಿತು ಎಂದು ನಿಕೋಲ್ ಹಾರ್ಪರ್ ಕೆಸಿಟಿವಿಗೆ ಹೇಳಿದರು.

ವಿಮಾನ ಹಾರಾಟದಲ್ಲಿ ಏರುಪೇರಾಗುವ ಸಾಧ್ಯತೆ ಬಗ್ಗೆ ಪೈಲಟ್ ಎಚ್ಚರಿಸಿದ್ದಾರೆ, ಹಾಗಾಗಿ, ನಿಮಗೆ ನಿಮ್ಮ ಆಸನದಿಂದ ಎದ್ದು ಶೌಚಾಲಯಕ್ಕೆ ಹೋಗಲು ಅನುಮತಿ ನೀಡಲಾಗುವುದಿಲ್ಲ ಎಂದು ವಿಮಾನ ಸಿಬ್ಬಂದಿಯೊಬ್ಬರು ತನಗೆ ಹೇಳಿದರು ಎಂದರು. ಬದಲಿಗೆ, ಸಿಬ್ಬಂದಿ ಲೋಟಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡಿದರು.

ಎರಡು ಲೋಟಗಳಲ್ಲಿ ಮೂತ್ರ ತುಂಬಿದಾಗ ಸಿಬ್ಬಂದಿ ತನಗೆ ಬೈದರು ಎಂಬುದಾಗಿಯೂ ನಿಕೋಲ್ ಆರೋಪಿಸಿದ್ದಾರೆ. ವಿಮಾನ ಹಾರಾಟ ಆರಂಭಗೊಂಡ 30 ನಿಮಿಷಗಳಲ್ಲೇ ಘಟನೆ ಸಂಭವಿಸಿದೆ ಎಂದು ನಿಕೋಲ್ ಹೇಳುತ್ತಾರೆ. ಆದರೆ, ವಿಮಾನ ಇಳಿಯುವಾಗ ಇದು ಸಂಭವಿಸಿದೆ ಎಂದು ವಿಮಾನಯಾನ ಕಂಪೆನಿ ಹೇಳಿದೆ.

ಏನು ಸಂಭವಿಸಿದೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಹಾರ್ಪರ್‌ರನ್ನು ಸಂಪರ್ಕಿಸಿರುವುದಾಗಿ ಯುನೈಟೆಡ್ ಹೇಳಿಕೆಯೊಂದರಲ್ಲಿ ತಿಳಿಸಿದೆ.


ಸಿಬ್ಬಂದಿಯನ್ನು ಚಿತ್ರೀಕರಿಸಿದ್ದಕ್ಕೆ ಟಿಕೆಟ್ ರದ್ದುಗೊಳಿಸಿದರು

ಯುನೈಟೆಡ್ ಏರ್‌ಲೈನ್ಸ್ ವಿಮಾನದ ಉದ್ಯೋಗಿಯೋರ್ವರನ್ನು ಒಳಗೊಂಡ ಜಗಳದ ಸನ್ನಿವೇಶವೊಂದನ್ನು ಚಿತ್ರೀಕರಿಸಿರುವುದಕ್ಕಾಗಿ ವಿಮಾನಯಾನ ಕಂಪೆನಿಯು ತನ್ನ ಟಿಕೆಟನ್ನು ರದ್ದುಗೊಳಿಸಿದೆ ಎಂದು ಭಾರತ ಮೂಲದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ತನ್ನ ಅನುಭವವನ್ನು ತನ್ನ ಸೆಲ್‌ಪೋನ್‌ನಲ್ಲಿ ಚಿತ್ರೀಕರಿಸಿದ ಬಳಿಕ, ವೆಸ್ಟ್ ಕೋಸ್ಟ್‌ಗೆ ಹೋಗುವ ವಿಮಾನಕ್ಕೆ ತನಗೆ ಪ್ರವೇಶ ನಿರಾಕರಿಸಲಾಯಿತು ಎಂದು 37 ವರ್ಷದ ನವಂಗ್ ಓಝಾ ಹೇಳಿದರು.

ಸೋಮವಾರ ನ್ಯೂ ಆರ್ಲಿನ್ಸ್‌ನಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ಹೋಗುವ ವಿಮಾನ ಹತ್ತಲು ಬಂದಿದ್ದ ಓಝಾ, ತನ್ನ ಲಗೇಜ್‌ಗೆ 300 ಡಾಲರ್ ಶುಲ್ಕ ವಿಧಿಸಿದ್ದಕ್ಕೆ ವಿಮಾನ ಏಜಂಟ್ ಒಬ್ಬರಿಗೆ ದೂರು ನೀಡಿದ್ದರು. ತನ್ನ ಮೊದಲ ಹಂತದ ಪ್ರಯಾಣದಲ್ಲಿ ಅದೇ ಲಗೇಜ್‌ಗೆ ತಾನು 125 ಡಾಲರ್ ಪಾವತಿಸಿದ್ದೆ ಎಂದು ಅವರು ವಾದಿಸಿದರು.

ಅದಕ್ಕೆ ತೃಪ್ತಿಕರ ಉತ್ತರ ಪಡೆಯಲು ವಿಫಲರಾದ ಓಝಾ, ಈ ಘಟನೆಯನ್ನು ಚಿತ್ರೀಕರಿಸಲು ಆರಂಭಿಸಿದರು.

ಆಗ ನ್ಯೂಆರ್ಲಿನ್ಸ್ ಟಿಕೆಟ್ ಕೌಂಟರ್‌ನಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು, ಈತನ ಟಿಕೆಟ್ ರದ್ದುಪಡಿಸುವಂತೆ ಇನ್ನೋರ್ವ ಸಿಬ್ಬಂದಿಗೆ ಸೂಚಿಸುವುದು ವೀಡಿಯೊದಲ್ಲಿ ದಾಖಲಾಗಿದೆ.

ತಾನು ಇನ್ನೊಂದು ವಿಮಾನದಲ್ಲಿ ಟಿಕೆಟ್ ಖರೀದಿಸಿ ಪ್ರಯಾಣ ಮುಂದುವರಿಸಬೇಕಾಯಿತು ಎಂದು ಓಝಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News