×
Ad

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಅನಿಲ್, ಜ್ಯೋತಿಗೆ ಕಂಚು

Update: 2017-05-11 23:47 IST

ಹೊಸದಿಲ್ಲಿ, ಮೇ 11: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಎರಡನೆ ದಿನವಾದ ಗುರುವಾರ ಅನಿಲ್ ಕುಮಾರ್ ಹಾಗೂ ಜ್ಯೋತಿ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದುಕೊಟ್ಟರು.

ಅನಿಲ್ 85 ಕೆಜಿ ತೂಕದ ಗ್ರಿಕೊ-ರೊಮನ್ ವಿಭಾಗದಲ್ಲಿ ಉಜ್ಬೇಕಿಸ್ತಾನದ ಮುಹಮ್ಮದಾಲಿಯನ್ನು 7-6 ರಿಂದ ಮಣಿಸಿದ ಅನಿಲ್ ಕಂಚಿನ ಪದಕ ಜಯಿಸಿದರು. ಮಹಿಳೆಯರ 75 ಕೆಜಿ ತೂಕ ವಿಭಾಗದಲ್ಲಿ ಜ್ಯೋತಿ ಜಪಾನ್‌ನ ಮಸಾಕೊ ಫುರುಚಿ ವಿರುದ್ಧ ಸೋತರು. ಜಪಾನ್ ಆಟಗಾರ್ತಿ ಫೈನಲ್‌ಗೆ ತಲುಪಿದ ಹಿನ್ನೆಲೆಯಲ್ಲಿ ಜ್ಯೋತಿಗೆ ಕಂಚು ಒಲಿಯಿತು.

2ನೆ ದಿನದ ಕುಸ್ತಿಯಲ್ಲಿ ಭಾರತದ ಐವರು ಸ್ಪರ್ಧಿಗಳಿದ್ದರು. ಈ ಪೈಕಿ ಇಬ್ಬರು ಮಾತ್ರ ಕಂಚಿನ ಪದಕ ಜಯಿಸಿದ್ದರು.

ಗ್ರಿಕೊ-ರೊಮನ್ 71 ಕೆಜಿ ವಿಭಾಗದಲ್ಲಿ ದೀಪಕ್ ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಕಿರ್ಜಿಸ್ತಾನದ ನುರ್ಗಾಝಿ ಅಸಂಗ್‌ಲೊವ್ ವಿರುದ್ಧ 1-8 ಅಂತರದಿಂದ ಹೀನಾಯವಾಗಿ ಸೋತರು. ಮಹಿಳೆಯರ 63 ಕೆಜಿ ತೂಕ ವಿಭಾಗದ ಕಂಚಿನ ಪದಕ ಸುತ್ತಿನಲ್ಲಿ ರಿತೂ ಕಠಿಣ ಹೋರಾಟ ನೀಡಿದರೂ ಪದಕ ಜಯಿಸಲು ವಿಫಲರಾದರು. ಇದಕ್ಕೆ ಮೊದಲು ದೀಪಕ್ ಇರಾನ್‌ನ ಅಫ್‌ಶಿನ್ ನೆಮಟ್ ಬ್ಯಾಬಂಗರ್ಡ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 1-3 ರಿಂದ ಸೋತರು. ಇರಾನ್ ಕುಸ್ತಿಪಟು ಫೈನಲ್‌ಗೆ ತಲುಪಿದ ಕಾರಣ ದೀಪಕ್ ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇ-ಸುತ್ತಿಗೆ ತೇರ್ಗಡೆಯಾದರು.

ಅನಿಲ್ ಕುಮಾರ್ 85ಕೆಜಿ ತೂಕ ವಿಭಾಗದಲ್ಲಿ ಜಪಾನ್‌ನ ಅಟ್ಸುಶಿ ಮಟ್ಸುಮೊಟೊ ವಿರುದ್ಧ 0-7 ರಿಂದ ಸೋತಿದ್ದಾರೆ. ಜಪಾನ್‌ನ ಕುಸ್ತಿಪಟು ಚಿನ್ನದ ಪದಕದ ಸುತ್ತಿಗೆ ತಲುಪಿದ ಹಿನ್ನೆಲೆಯಲ್ಲಿ ಅನಿಲ್ ಕಂಚಿನ ಪದಕದ ಸುತ್ತಿಗೆ ಪ್ರವೇಶಿಸಿದ್ದಾರೆ.

 ಮಹಿಳೆಯರ 63ಕೆಜಿ ತೂಕ ವಿಭಾಗದಲ್ಲಿ ರಿತು ತೈಪೆಯ ಮಿನ್-ವೆನ್ ಹೌರನ್ನು 5-4 ರಿಂದ ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದರು. ಆದರೆ, ಮಂಗೋಲಿಯದ ಬ್ಯಾಟ್‌ಸೆಟ್‌ಸೆಗ್ ವಿರುದ್ಧ 2-12 ರಿಂದ ಸೋತಿದ್ದಾರೆ. ಮಂಗೋಲಿಯ ಕುಸ್ತಿಪಟು ಫೈನಲ್‌ಗೆ ತಲುಪಿರುವ ಹಿನ್ನೆಲೆಯಲ್ಲಿ ರಿತು ಕಂಚಿನ ಪದಕಕ್ಕಾಗಿ ಹೋರಾಡುವ ಅವಕಾಶ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News