ಸಾಕ್ಷಿ , ವಿನೀಶ್, ದಿವ್ಯಾಗೆ ಬೆಳ್ಳಿ ಪದಕ
ಹೊಸದಿಲ್ಲಿ, ಮೇ 12: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್(60 ಕೆಜಿ),ವಿನೀಶ್ ಫೋಗತ್ ಹಾಗೂ ದಿವ್ಯಾ ಕಕ್ರಾನ್ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಬಾಚಿಕೊಂಡಿದ್ದಾರೆ.
ಇಲ್ಲಿನ ಜೆಡಿ ಜಾಧವ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಬಾರಿ 80 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ ಹರ್ಯಾಣದ 24ರ ಹರೆಯದ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಜಪಾನ್‌ನ ಒಲಿಂಪಿಕ್ಸ್ ಚಾಂಪಿಯನ್ ರಿಸಾಕೊ ಕವಾಯಿ ವಿರುದ್ದ 2 ನಿಮಿಷ, 44 ಸೆಕೆಂಡ್‌ಗಳ ಹೋರಾಟದಲ್ಲಿ 10-0 ಅಂತರದಿಂದ ಸುಲಭವಾಗಿ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟರು.
ಕಳೆದ ವರ್ಷ ರಿಯೋ ಗೇಮ್ಸ್‌ನಲ್ಲಿ 58 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಸಾಕ್ಷಿ ಜಪಾನ್‌ನ ಬಲಿಷ್ಠ ಕುಸ್ತಿಪಟುವಿನ ಸವಾಲನ್ನು ಎದುರಿಸಲು ವಿಫಲರಾದರು.
ಇದಕ್ಕೆ ಮೊದಲು ಸಾಕ್ಷಿ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಕುಸ್ತಿಪಟು ನಾಬಿರಾ ಎಸೆನ್‌ಬಾಯೆವಾರನ್ನು 6-2 ರಿಂದ ಮಣಿಸಿ ಸೆಮಿ ಫೈನಲ್‌ಗೆ ತಲುಪಿದ್ದರು. ಕಝಕಿಸ್ತಾನದ ಆಯಾಯುಲಿಮ್ ಕಾಸಿಮೊವಾರನ್ನು ಮಣಿಸಿ ಫೈನಲ್‌ಗೆ ತಲುಪಿದರು. ವಿನೀಶ್(ಮಹಿಳೆಯರ 55 ಕೆಜಿ) ಫೈನಲ್‌ನಲ್ಲಿ ಜಪಾನ್‌ನ ಸಾಯೆ ನಂಜೊ ವಿರುದ್ಧ 8-4 ಅಂತರದಿಂದ ಸೋತಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಸೆವಾರಾ ಎಶ್ಮುರಟೋವಾರನ್ನು 10-0 ಹಾಗೂ ಸೆಮಿ ಫೈನಲ್‌ನಲ್ಲಿ ಚೀನಾದ ಕ್ಯೂ ಝಾಂಗ್‌ರನ್ನು 4-0 ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. 69 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಸುತ್ತಿಗೆ ತೇರ್ಗಡೆಯಾಗಿದ್ದ ಹೊಸ ಮುಖ ದಿವ್ಯಾ ಕಕ್ರಾನ್ ಅವರು ಸಾರಾ ಡೊಶೊ ವಿರುದ್ಧ ಸೋತಿದ್ದಾರೆ. ಕ್ವಾರ್ಟರ್‌ಫೈನಲ್‌ನಲ್ಲಿ ತೈಪೆಯ ಚೆನ್-ಚಿ ಹ್ಯೂಯಾಂಗ್‌ರನ್ನು 2-0 ಅಂತರದಿಂದ ಮಣಿಸಿದ್ದ ದಿವ್ಯಾ ಸೆಮಿ ಫೈನಲ್‌ನಲ್ಲಿ ಕೊರಿಯದ ಹಿಯೊನಿಯೊಂಗ್‌ರನ್ನು 12-4 ರಿಂದ ಮಣಿಸಿದ್ದಾರೆ.
ರಿತುಗೆ ಕಂಚು: ರಿತು ಫೋಗತ್(ಮಹಿಳೆಯರ 48ಕೆಜಿ) ಸೆಮಿಫೈನಲ್ ಸುತ್ತಿನಲ್ಲಿ ಜಪಾನ್‌ನ ಯೂಯಿ ಸುಸಾಕಿ ವಿರುದ್ಧ 0-9 ಅಂತರದಿಂದ ಸೋತಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಎದುರಾಳಿ ಚೀನಾದ ಯನಾನ್ ಸನ್ ಪಂದ್ಯದಿಂದ ಹಿಂದೆ ಸರಿದ ಕಾರಣ ಫೋಗತ್ ಕಂಚಿನ ಪದಕ ತನ್ನದಾಗಿಸಿಕೊಂಡರು.