×
Ad

ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿಗೆ ರೊನಾಲ್ಡೊ?

Update: 2017-05-12 23:14 IST

 ಮ್ಯಾಡ್ರಿಡ್, ಮೇ 12: ಭಾರತದಲ್ಲಿ ನಡೆಯುವ ಫಿಫಾ ಅಂಡರ್-17 ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಐದು ತಿಂಗಳಷ್ಟೇ ಬಾಕಿಯಿದೆ. ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಟೂರ್ನಮೆಂಟ್‌ಗಾಗಿ ಭರದ ಸಿದ್ಧತೆಯಲ್ಲಿ ತೊಡಗಿದೆ.

ಪೋರ್ಚುಗಲ್‌ನ ಫಾರ್ವರ್ಡ್ ಆಟಗಾರ, ರಿಯಲ್ ಮ್ಯಾಡ್ರಿಡ್‌ನ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಜು.7 ರಂದು ಮುಂಬೈನಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ ಡ್ರಾ ಪ್ರಕ್ರಿಯೆಯಲ್ಲಿ ಹಾಜರಾಗಲು ಆಗಮಿಸುವಂತೆ ಆಹ್ವಾನ ನೀಡಲು ನಿರ್ಧರಿಸಿದೆ.

 ಈ ವಿಷಯದ ಬಗ್ಗೆ ಮಾತನಾಡಿದ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್,‘‘ನಾವು ಈ ಬಗ್ಗೆ ಪೋರ್ಚುಗಲ್ ಫುಟ್ಬಾಲ್ ಫೆಡರೇಶನ್‌ನೊಂದಿಗೆ ಮಾತನಾಡಿದ್ದೇವೆ. ರೊನಾಲ್ಡೊ ಏಜೆಂಟ್‌ರನ್ನು ಸಂಪರ್ಕಿಸಲು ಯತ್ನಿಸಿದ್ದೇವೆ. ರೊನಾಲ್ಡೊ ಆ ನಿರ್ದಿಷ್ಟ ದಿನದಂದು ಬಿಡುವಾಗಿದ್ದರೆ ಜುಲೈ 7 ರಂದು ಮುಂಬೈನಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್ ಡ್ರಾ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ’’ ಎಂದು ಹೇಳಿದ್ದಾರೆ.

ರೊನಾಲ್ಡೊ ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್‌ನ್ನು ತಲುಪಿದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು. ಫಿಫಾ ಅಂಡರ್-17 ವಿಶ್ವಕಪ್ ಅಕ್ಟೋಬರ್ 6 ರಿಂದ ಆರಂಭವಾಗಲಿದೆ. ಅಕ್ಟೋಬರ್ 28 ರಂದು ಕೋಲ್ಕತಾದಲ್ಲಿ ಫೈನಲ್ ಪಂದ್ಯ ನಡೆಯುವುದು. ಟೂರ್ನಿಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಲಿದ್ದು, ಆತಿಥೇಯ ಭಾರತ ತಂಡ ಇದೇ ಮೊದಲ ಬಾರಿ ಫಿಫಾ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News