×
Ad

ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 376 ರನ್

Update: 2017-05-12 23:17 IST

 ಡೊಮಿನಿಕ, ಮೇ 12: ಆರಂಭಿಕ ಆಟಗಾರ ಅಝರ್ ಅಲಿ(112), ಶತಕ, ವಿದಾಯದ ಪಂದ್ಯ ಆಡುತ್ತಿರುವ ನಾಯಕ ಮಿಸ್ಬಾವುಲ್ ಹಕ್(59) ಹಾಗೂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸರ್ಫರಾಝ್ ಅಹ್ಮದ್(51) ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಪಾಕಿಸ್ತಾನ ತಂಡ ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 376 ರನ್ ಕಲೆ ಹಾಕಿದೆ.

ವಿದಾಯದ ಪಂದ್ಯವನ್ನಾಡುತ್ತಿರುವ ಇನ್ನೋರ್ವ ಬ್ಯಾಟ್ಸ್‌ಮನ್ ಯೂನಿಸ್ ಖಾನ್ ಕೇವಲ 18 ರನ್ ಗಳಿಸಿ ಔಟಾದರು. ಮಿಸ್ಬಾವುಲ್‌ಹಕ್ ಖಾತೆ ತೆರೆಯಲು 21 ಎಸೆತ ಬಳಸಿಕೊಂಡರು. ಈ ನಡುವೆ ಅಝರ್ ಅಲಿ 14ನೆ ಶತಕ (127 ರನ್, 334 ಎಸೆತ, 8 ಬೌಂಡರಿ, 2 ಸಿಕ್ಸರ್)ಪೂರೈಸಿದರು.

ಲಂಚ್ ವಿರಾಮದ ಬಳಿಕ ಆಕರ್ಷಕ ಬ್ಯಾಟಿಂಗ್‌ಗೆ ಮುಂದಾದ ಮಿಸ್ಬಾವುಲ್ ಹಕ್ ಸ್ಪಿನ್ನರ್‌ಗಳಾದ ರಾಸ್ಟನ್ ಚೇಸ್ ಹಾಗೂ ದೇವೇಂದ್ರ ಬಿಶೂ ಅವರನ್ನು ಗುರಿಯಾಗಿರಿಸಿ ಬ್ಯಾಟಿಂಗ್ ಮಾಡಿದರು. ಟೀ ವಿರಾಮದ ಬಳಿಕ 39ನೆ ಅರ್ಧಶತಕ(59 ರನ್) ಸಿಡಿಸಿದ ಮಿಸ್ಬಾವುಲ್‌ಹಕ್ ಸ್ಪಿನ್ನರ್ ಚೇಸ್‌ಗೆ ವಿಕೆಟ್ ಒಪ್ಪಿಸಿದರು.

  ಮುಹಮ್ಮದ್ ಆಮಿರ್ ಹಾಗೂ ಯಾಸಿರ್ ಶಾ ವಿಕೆಟ್‌ನ್ನು ಸತತ ಎಸೆತಗಳಲ್ಲಿ ಕಬಳಿಸಿದ ವಿಂಡೀಸ್ ತಂಡ ಪಾಕ್‌ಗೆ ತಿರುಗೇಟು ನೀಡಿತು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ಸರ್ಫರಾಝ್ ಅಹ್ಮದ್ ಕೇವಲ 67 ಎಸೆತಗಳಲ್ಲಿ 13ನೆ ಅರ್ಧಶತಕ ಪೂರೈಸಿದರು. ಈ ಮೂಲಕ ಪಾಕಿಸ್ತಾನದ ಸ್ಕೋರನ್ನು 350ರ ಗಡಿ ದಾಟಿಸಿದರು. ಸರ್ಫರಾಝ್‌ಗೆ ಬಾಲಂಗೋಚಿ ಮುಹಮ್ಮದ್ ಅಬ್ಬಾಸ್ ಉತ್ತಮ ಸಾಥ್ ನೀಡಿದರು. ಆದರೆ, ಈ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಬ್ಬಾಸ್ ವಿಕೆಟ್ ಪಡೆದ ಸ್ಪಿನ್ನರ್ ದೇವೇಂದ್ರ ಬಿಶು ಪಾಕಿಸ್ತಾನದ ಮೊದಲ ಇನಿಂಗ್ಸ್‌ಗೆ ತೆರೆ ಎಳೆದರು.

ಪಾಕಿಸ್ತಾನದ ಮೊದಲ ಇನಿಂಗ್ಸ್‌ಗೆ ಉತ್ತರಿಸಹೊರಟಿರುವ ವಿಂಡೀಸ್ 2ನೆ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ 376(ಅಝರ್ ಅಲಿ 127, ಮಿಸ್ಬಾವುಲ್ ಹಕ್ 59, ರಾಸ್ಟನ್ ಚೇಸ್ 4-103, ಜೇಸನ್ ಹೋಲ್ಡರ್ 3-71)

ವೆಸ್ಟ್‌ಇಂಡೀಸ್ 14-0(ಪೊವೆಲ್ ಅಜೇಯ 9, ಬ್ರಾತ್‌ವೇಟ್ ಅಜೇಯ 5)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News