×
Ad

ಡೆವಿಲ್ಸ್‌ಗೆ ಬೆದರಿದ ಪುಣೆಗೆ 7 ರನ್ ಸೋಲು

Update: 2017-05-12 23:49 IST

ಹೊಸದಿಲ್ಲಿ, ಮೇ 12: ಐಪಿಎಲ್‌ನ 52ನೆ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು 7 ರನ್‌ಗಳ ಅಂತರದಿಂದ ಮಣಿಸಿತು.

ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆದ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 169 ರನ್ ಗುರಿ ಪಡೆದಿದ್ದ ಪುಣೆ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಪುಣೆಗೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 25 ರನ್ ಅಗತ್ಯವಿತ್ತು. ಆಗ ಸತತ 2 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ ಮನೋಜ್ ತಿವಾರಿ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಅಂತಿಮ ಓವರ್ ಬೌಲಿಂಗ್ ಮಾಡಿದ ಕಮಿನ್ಸ್ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ತಿವಾರಿ(64 ರನ್, 45 ಎಸೆತ, 6 ಬೌಂಡರಿ, 3 ಸಿಕ್ಸರ್) ವಿಕೆಟ್ ಪಡೆದು ಡೆಲ್ಲಿಗೆ ರೋಚಕ ಗೆಲುವು ತಂದರು.

ನಿರ್ಣಾಯಕ ಪಂದ್ಯದಲ್ಲಿ ಸೋತಿರುವ ಪುಣೆಯ ಪ್ಲೇ-ಆಫ್ ಅವಕಾಶಕ್ಕೆ ಹಿನ್ನಡೆಯಾಗಿದೆ. ಪುಣೆ ತಂಡ ಪಂಜಾಬ್‌ನ ವಿರುದ್ಧ ಮೇ 14 ರಂದು ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಪುಣೆ ತಂಡದ ಪರ ಮನೋಜ್ ತಿವಾರಿ ಅಗ್ರ ಸ್ಕೋರರ್(64) ಎನಿಸಿಕೊಂಡರು. ನಾಯಕ ಸ್ಟೀವನ್ ಸ್ಮಿತ್(38) ಹಾಗೂ ಬೆನ್ ಸ್ಟೋಕ್ಸ್(33) ಎರಡಂಕೆ ಸ್ಕೋರ್ ದಾಖಲಿಸಿದರು. ತಿವಾರಿ ಹಾಗೂ ಸ್ಟೋಕ್ಸ್ 4ನೆ ವಿಕೆಟ್‌ಗೆ 51 ರನ್ ಸೇರಿಸಿದ್ದು, ಇದು ತಂಡದ ಪರ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.

ಡೆಲ್ಲಿ 168/8: ಇದಕ್ಕೆ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು.

ಡೆಲ್ಲಿಯ ಆರಂಭ ಚೆನ್ನಾಗಿರಲಿಲ್ಲ. 2.1 ಓವರ್‌ಗಳಲ್ಲಿ 9 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್(2) ಹಾಗೂ ಶ್ರೇಯಸ್ ಐಯ್ಯರ್(3) ವಿಕೆಟ್ ಒಪ್ಪಿಸಿದರು.

ಆಗ 3ನೆ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿದ ಇನ್ನೋರ್ವ ಆರಂಭಿಕ ಆಟಗಾರ ಕರುಣ್ ನಾಯರ್(64 ರನ್, 45 ಎಸೆತ, 9 ಬೌಂಡರಿ) ಹಾಗೂ ರಿಷಬ್ ಪಂತ್(36 ರನ್, 22 ಎಸೆತ, 4 ಬೌಂಡರಿ, 2 ಸಿಕ್ಸರ್) ತಂಡಕ್ಕೆ ಆಸರೆಯಾದರು.

ಪಂತ್ ವಿಕೆಟ್ ಕಬಳಿಸಿದ ಝಾಂಪ ಈ ಜೋಡಿಯನ್ನು ಬೇರ್ಪಡಿಸಿದರು. ಮರ್ಲಾನ್ ಸ್ಯಾಮುಯೆಲ್ಸ್(27), ಕಮಿನ್ಸ್(11) ಹಾಗೂ ಅಮಿತ್ ಮಿಶ್ರಾ(ಅಜೇಯ 13) ಕೊಡುಗೆಯ ನೆರವಿನಿಂದ ಡೆಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

ಪುಣೆಯ ಪರವಾಗಿ ಜೈದೇವ್ ಉನದ್ಕಟ್(2-29) ಹಾಗೂ ಬೆನ್ ಸ್ಟೋಕ್ಸ್(2-31) ತಲಾ ಎರಡು ವಿಕೆಟ್ ಪಡೆದರು.

100 ವಿಕೆಟ್ ಪೂರೈಸಿದ ಝಹೀರ್

 ಪುಣೆ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಅವರನ್ನು ಮೊದಲ ಓವರ್‌ನ ಮೊದಲ ಎಸೆತದಲ್ಲೇ ಕ್ಲೀನ್‌ಬೌಲ್ಡ್ ಮಾಡಿದ ಡೆಲ್ಲಿ ನಾಯಕ ಝಹೀರ್ ಖಾನ್ ಐಪಿಎಲ್‌ನಲ್ಲಿ 100 ವಿಕೆಟ್ ಪೂರೈಸಿದರು.

 38ರ ಹರೆಯದ ಝಹೀರ್ ಐಪಿಎಲ್‌ನಲ್ಲಿ 100 ವಿಕೆಟ್ ಪಡೆದ 8ನೆ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News