ಮಹಿಳೆಯರ ಕ್ರಿಕೆಟ್: ಭಾರತದ ಆರಂಭಿಕರಿಂದ ವಿಶ್ವ ದಾಖಲೆ ಜೊತೆಯಾಟ

Update: 2017-05-15 13:30 GMT

ಹೊಸದಿಲ್ಲಿ, ಮೇ 15: ದೀಪ್ತಿ ಶರ್ಮ ಹಾಗೂ ಪೂನಂ ರಾವತ್ ಮೊದಲ ವಿಕೆಟ್‌ಗೆ ಸೇರಿಸಿದ ವಿಶ್ವದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ ಐರ್ಲೆಂಡ್ ವಿರುದ್ಧ ಚತುಷ್ಕೋನ ಸರಣಿಯ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 358 ರನ್ ಗಳಿಸಿತು.

ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್‌ನಲ್ಲಿ 300ಕ್ಕೂ ಅಧಿಕ ರನ್ ಗಳಿಸಿದೆ.

ದಕ್ಷಿಣ ಆಫ್ರಿಕದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ದೀಪ್ತಿ(ಅಜೇಯ 188) ಹಾಗೂ ರಾವುತ್(109) ಭದ್ರಬುನಾದಿ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 320 ರನ್ ಜೊತೆಯಾಟ ನಡೆಸಿ ವಿಶ್ವದಾಖಲೆ ನಿರ್ಮಿಸಿತು. ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ನಲ್ಲಿ ಇದೇ ಮೊದಲ ಬಾರಿ 300ಕ್ಕೂ ಅಧಿಕ ರನ್ ದಾಖಲಾಗಿದೆ.

 ದೀಪ್ತಿ ಹಾಗೂ ರಾವುತ್ 45.3 ಓವರ್‌ಗಳಲ್ಲಿ ವಿಶ್ವದಾಖಲೆಯ ಜೊತೆಯಾಟ ನಡೆಸಿದರು. ಶಿಖಾ ಪಾಂಡೆ(27 ರನ್, 14 ಎಸೆತ) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್(358) ದಾಖಲಿಸಿತು. 2004ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 2 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿತ್ತು.

 ದೀಪ್ತಿ ಶರ್ಮ 160 ಎಸೆತಗಳಲ್ಲಿ 27 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಬೆಂಬಲದಿಂದ 188 ರನ್ ಗಳಿಸಿದರು. ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೆ ಆಟಗಾರ್ತಿ ಎನಿಸಿಕೊಂಡರು. 1997ರಲ್ಲಿ ಡೆನ್ಮಾರ್ಕ್ ತಂಡದ ವಿರುದ್ಧ ಬೆಲಿಂಡಾ ಕ್ಲಾರ್ಕ್ ಅಜೇಯ 229 ರನ್ ಗಳಿಸಿದ್ದರು. ಭಾರತದ ಪರ 2005ರಲ್ಲಿ ಕರಾಚಿಯಲ್ಲಿ ಜಯಾ ಶರ್ಮ ಪಾಕ್ ವಿರುದ್ಧ ವೈಯಕ್ತಿಕ ಗರಿಷ್ಠ ಸ್ಕೋರ್(ಅಜೇಯ 138) ಗಳಿಸಿದ್ದರು.

 ಸರಣಿಯ ಕಳೆದ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಜುಲಾನ್ ಗೋಸ್ವಾಮಿ 153ನೆ ಪಂದ್ಯದಲ್ಲಿ 181 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಭಾರತ ಸರಣಿಯಲ್ಲಿ ಈತನಕ ಆಡಿರುವ ಎಲ್ಲ 3 ಪಂದ್ಯಗಳನ್ನು ಜಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News