ಸ್ಯಾಫ್ ಚಾಂಪಿಯನ್‌ಶಿಪ್ ಮುಂದೂಡಿಕೆಗೆ ಭಾರತ ಮನವಿ
ಹೊಸದಿಲ್ಲಿ, ಮೇ 16: ಫಿಫಾ ಅಂಡರ್-17 ವಿಶ್ವಕಪ್ ಹಾಗೂ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ನಡೆಯಲಿರುವ ಹಿನ್ನೆಲೆಯಲ್ಲಿ ಸ್ಯಾಫ್ ಚಾಂಪಿಯನ್‌ಶಿಪ್ ಫುಟ್ಬಾಲ್ ಟೂರ್ನಮೆಂಟ್‌ನ್ನು ಮುಂದೂಡುವಂತೆ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಪೈಕಿ ಒಂದಾಗಿರುವ ಭಾರತ ಸ್ಪರ್ಧೆಯ ಆಯೋಜಕರಿಗೆ ವಿನಂತಿಸಿಕೊಂಡಿದೆ.
12ನೆ ಆವೃತ್ತಿಯ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್(ಸ್ಯಾಫ್)ಕೂಟವು ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆಯಲಿದೆ. ಈ ಬಾರಿಯ ಸ್ಯಾಫ್ ಟೂರ್ನಿಯು ಡಿ.25 ರಿಂದ ಬಾಂಗ್ಲಾದೇಶದಲ್ಲಿ ನಡೆಯಲಿರುವುದು.
ಹಾಲಿ ಚಾಂಪಿಯನ್ ಹಾಗೂ ಟೂರ್ನಮೆಂಟ್‌ನ ಯಶಸ್ವಿ ತಂಡವಾಗಿರುವ ಭಾರತ ಟೂರ್ನಿಯ ವೇಳೆಯಲ್ಲಿ ತಾನು ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಭಾರತ 2015ರ ಆವೃತ್ತಿಯ ಟೂರ್ನಿಯಲ್ಲಿ ಅಫ್ಘಾನಿಸ್ತಾನವನ್ನು 2-1 ರಿಂದ ಮಣಿಸಿ ಏಳನೆ ಬಾರಿ ಸ್ಯಾಫ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
‘‘ಅಂಡರ್-17 ವಿಶ್ವಕಪ್‌ನ ಹಿನ್ನೆಲೆಯಲ್ಲಿ ಐಎಸ್‌ಎಲ್ ಟೂರ್ನಿಯು ಈ ಬಾರಿ ವಿಳಂಬವಾಗಿ ಆರಂಭವಾಗಲಿದೆ. ಐಎಸ್‌ಎಲ್ ಟೂರ್ನಿಯು ಡಿಸೆಂಬರ್‌ನೊಳಗೆ ಕೊನೆಗೊಳ್ಳುವುದಿಲ್ಲ. ಐಎಸ್‌ಎಲ್‌ನಲ್ಲಿ ಈ ಬಾರಿ ಹೊಸ ತಂಡಗಳ ಸೇರ್ಪಡೆಯಾಗಲಿದೆ’’ ಎಂದು ಸ್ಯಾಫ್ ಪ್ರಧಾನ ಕಾರ್ಯದರ್ಶಿ ಅನ್ವರುಲ್ ಹಕ್ ಹೇಳಿದ್ದಾರೆ.
‘‘ ಭಾರತಕ್ಕೆ ಈ ವರ್ಷ ವಿಶೇಷವಾಗಿದ್ದು, ಅಂಡರ್-17 ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲಿದೆ. ಮುಂದಿನ ವರ್ಷದ ಮೇನಲ್ಲಿ ಟೂರ್ನಿಯನ್ನು ಆಯೋಜಿಸುವಂತೆ ಸ್ಯಾಫ್ ಆಯೋಜಕರಿಗೆ ವಿನಂತಿಸಿಕೊಂಡಿದ್ದೇವೆ. ನಮ್ಮ ಕೋರಿಕೆಯನ್ನು ಮನ್ನಿಸಲಿದ್ದಾರೆಂಬ ವಿಶ್ವಾಸ ನನಗಿದೆ’’ ಎಂದು ಎಐಎಫ್‌ಎಫ್ ಉಪಾಧ್ಯಕ್ಷ ಸುಬ್ರತಾ ದತ್ ತಿಳಿಸಿದ್ದಾರೆ.
ಭಾರತ ಈ ವರ್ಷದ ಅಕ್ಟೋಬರ್ 6 ರಿಂದ 28ರ ತನಕ ಫಿಫಾ ಅಂಡರ್-17 ವಿಶ್ವಕಪ್‌ನ ಆತಿಥ್ಯವಹಿಸಿಕೊಳ್ಳಲಿದೆ.