ಭಾರತ-ಲೆಬನಾನ್ ಸೌಹಾರ್ದ ಫುಟ್ಬಾಲ್ ಪಂದ್ಯ ರದ್ದು
ಹೊಸದಿಲ್ಲಿ, ಮೇ 16: ಮುಂಬೈನಲ್ಲಿ ಜೂ.7 ರಂದು ನಡೆಯಬೇಕಾಗಿದ್ದ ಭಾರತ ಹಾಗೂ ಲೆಬನಾನ್ ನಡುವಿನ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯ ರದ್ದಾಗಿದೆ. ದಕ್ಷಿಣ ಏಷ್ಯಾ ರಾಷ್ಟ್ರ ಲೆಬನಾನ್ ಫುಟ್ಬಾಲ್ ತಂಡ ತನ್ನ ಆಟಗಾರರಿಗೆ ವೀಸಾಗಳನ್ನು ಪೂರೈಸಲು ಸಮಸ್ಯೆ ಎದುರಿಸಿದ್ದ ಕಾರಣ ಭಾರತ ಪ್ರವಾಸವನ್ನು ರದ್ದುಪಡಿಸಲು ನಿರ್ಧರಿಸಿದೆ.
ಲೆಬನಾನ್ ವಿರುದ್ಧದ ಪಂದ್ಯವು ಜೂ.13 ರಂದು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಕಿರ್ಝಿ ರಿಪಬ್ಲಿಕ್ ತಂಡದ ವಿರುದ್ಧ ಏಷ್ಯಾಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಪೂರ್ವತಯಾರಿ ಎಂದೇ ಪರಿಗಣಿಸಲಾಗಿತ್ತು.
ಲೆಬನಾನ್ ಬದಲಿ ತಂಡವನ್ನು ಕರೆತರಲು ಪ್ರಯತ್ನಿಸಲಾಗುತ್ತಿದೆ. ಆದರೆ, ಸಮಯಾವಕಾಶ ಕಡಿಮೆ ಇರುವ ಕಾರಣ ತಕ್ಷಣ ಇದು ಸಾಧ್ಯವಿಲ್ಲ ಎಂದು ಎಐಎಫ್‌ಎಫ್ ತಿಳಿಸಿದೆ.
‘‘ಭಾರತದ ರಾಷ್ಟ್ರೀಯ ತಂಡದ ವಿರುದ್ಧ ಜೂ.7,2017ರಲ್ಲಿ ನಡೆಯಬೇಕಾಗಿದ್ದ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಭಾಗವಹಿಸಲು ಭಾರತಕ್ಕೆ ಪ್ರವಾಸಕೈಗೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಲೆಬನಾನ್ ಫುಟ್ಬಾಲ್ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ಲೆಬನಾನ್ ತಂಡ ಮುಂಬೈನಲ್ಲಿ ಭಾರತ ವಿರುದ್ಧ ಆಡುವ ಬಗ್ಗೆ 2017ರ ಮಾರ್ಚ್‌ನಲ್ಲಿ ಖಚಿತಪಡಿಸಿತ್ತು. ಎಐಎಫ್‌ಎಫ್ ಬದಲಿ ತಂಡವನ್ನು ಆಡಿಸುವ ಬಗ್ಗೆ ಚಿಂತಿಸುತ್ತಿದೆ’’ ಎಂದು ಎಐಎಫ್‌ಎಫ್ ತಿಳಿಸಿದೆ.
‘‘ಸೌಹಾರ್ದ ಪಂದ್ಯ ಆಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ. ಬೆರುಟ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯಲ್ಲಿ ತಂಡದ ಹೆಚ್ಚಿನ ಆಟಗಾರರ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ. ಎಲ್ಲ ಆಟಗಾರರು ವಿದೇಶದಲ್ಲಿ ಕ್ಲಬ್ ಪರ ಆಡುತ್ತಿದ್ದರು. ವೀಸಾಕ್ಕೆ ಅರ್ಜಿ ಸಲ್ಲಿಸಲು ಲೆಬನಾನ್‌ಗೆ ಆಗಮಿಸಲು ಆಟಗಾರರಿಗೆ ಸಾಧ್ಯವಾಗಲಿಲ್ಲ’’ ಎಂದು ಲೆಬನಾನ್ ಎಫ್‌ಎನ ಪ್ರಧಾನ ಕಾರ್ಯದರ್ಶಿ ಜಿಹಾದ್ ಅಲ್ ಚೊಹಾಫ್ ಅವರು ಎಐಎಫ್‌ಎಫ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.