×
Ad

ಆಂಧ್ರ ಸರಕಾರದ ಉನ್ನತ ಅಧಿಕಾರಿಯಾಗಿ ಸಿಂಧು

Update: 2017-05-16 23:09 IST

ಹೈದರಾಬಾದ್, ಮೇ 16: ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿರುವ ಆಂಧ್ರಪ್ರದೇಶ ಸರಕಾರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಸರಕಾರದ ಗ್ರೂಪ್-1 ಅಧಿಕಾರಿಯನ್ನಾಗಿ ನೇಮಿಸಲು ನಿರ್ಧರಿಸಿದೆ.

ಆಂಧ್ರಪ್ರದೇಶ ಕಾಯ್ದೆ 1994ರ ಪ್ರಕಾರ ಬ್ಯಾಡ್ಮಿಂಟನ್ ಆಟಗಾರರನ್ನು ಯಾವುದೇ ಸಾರ್ವಜನಿಕ ಸೇವೆಯಲ್ಲಿ ನೇಮಕ ಮಾಡುವಂತಿಲ್ಲ. ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಆಯೋಗದಿಂದಲೇ, ಆಯ್ಕೆ ಸಮಿತಿ ಅಥವಾ ಉದ್ಯೋಗ ವಿನಿಯಮದಿಂದಲೇ ಈ ಪ್ರಕ್ರಿಯೆ ನಡೆಯಬೇಕಾಗುತ್ತದೆ.

  ಸಂಪುಟ ಸಭೆಯ ಪ್ರಸ್ತಾವವನ್ನು ಜಾರಿಗೆ ತರುವ ಉದ್ದೇಶದಿಂದ ಸರಕಾರವು ಸಿಂಧು ಅವರನ್ನು ಕಂದಾಯ ವಿಭಾಗೀಯ ಅಧಿಕಾರಿಯಾಗಿ ನೇರ ನೇಮಕಾತಿ ಮಾಡಲು ಪೂರ್ವಕಥಿತ ಕಾನೂನಿನ ಸೆಕ್ಷನ್-4ನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ.

ಕಾಯ್ದೆ ತಿದ್ದುಪಡಿಗಾಗಿ ರಾಜ್ಯ ಹಣಕಾಸು ಸಚಿವ ಯನಮಲ ರಾಮಕೃಷ್ಣ ಅವರು ವಿಧೇಯಕವನ್ನು ಪರಿಚಯಿಸಿದ್ದು, ವಿಧೇಯಕವು ರಾಜ್ಯ ವಿಧಾನಮಂಡಳದಲ್ಲಿ ಅವಿರೋಧವಾಗಿ ಜಾರಿಗೆ ತರಲಾಗಿದೆ. ವಿಧೇಯಕವನ್ನು ವಿಧಾನಪರಿಷತ್‌ನಲ್ಲಿ ಅಂಗೀಕರಿಸಲಾಯಿತು.

ಸಿಂಧು ಅವರನ್ನು ರಾಜ್ಯದ ಕ್ರೀಡಾ ರಾಯಭಾರಿಯನ್ನಾಗಿ ಆಯ್ಕೆ ಮಾಡಲು ತನ್ನ ಸರಕಾರ ಉದ್ದೇಶಿಸಿದೆ ಎಂದು ರಾಜ್ಯ ಅಸೆಂಬ್ಲಿಯಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.

  ಕಳೆದ ವರ್ಷ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದ ಸಿಂಧು ಅವರನ್ನು ಆಂಧ್ರಪ್ರದೇಶ ಸಂಪುಟವು ಗ್ರೂಪ್-1(ಗಜೆಟೆಡ್ ಅಧಿಕಾರಿ) ಹುದ್ದೆಗೆ ಆಯ್ಕೆ ಮಾಡಲು 2016ರ ಆಗಸ್ಟ್ 22 ರಂದು ನಿರ್ಧಾರ ಕೈಗೊಂಡಿತ್ತು. ಆಂಧ್ರ ಸರಕಾರ ಸಿಂಧುಗೆ 3 ಕೋ.ರೂ. ಬಹುಮಾನ ಹಾಗೂ ಅಮರಾವತಿಯಲ್ಲಿ ವಸತಿ ಫ್ಲಾಟ್‌ವೊಂದನ್ನು ಉಡುಗೊರೆಯಾಗಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News