ಯುವಿಗೆ ಫಿಟ್‌ನೆಸ್ ಟೆಸ್ಟ್, ನೆಹ್ರಾ ಅಲಭ್ಯ
ಬೆಂಗಳೂರು,ಮೇ 16: ‘‘ವೇಗದ ಬೌಲರ್ ಆಶೀಷ್ ನೆಹ್ರಾ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಆಡಲು ಫಿಟ್ ಆಗಿಲ್ಲ. ಫಿಟ್‌ನೆಸ್ ಪರೀಕ್ಷೆಯ ಬಳಿಕವೇ ಯುವರಾಜ್ ಸಿಂಗ್‌ರ ಲಭ್ಯತೆಯ ಬಗ್ಗೆ ಖಚಿತವಾಗಲಿದೆ. ಯುವರಾಜ್‌ಗೆ ಫಿಟ್‌ನೆಸ್ ಸಾಬೀತುಪಡಿಸಲು ಅವಕಾಶ ನೀಡಲಾಗುವುದು’’ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.
ಮೇ 6 ರಂದು ನಡೆದಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ನೆಹ್ರಾ ಮೈದಾನವನ್ನು ತೊರೆದಿದ್ದರು.ಆ ಪಂದ್ಯವನ್ನು ಹೈದರಾಬಾದ್ 12 ರನ್‌ಗಳಿಂದ ಸೋತಿತ್ತು. ನೆಹ್ರಾ ಡೆತ್ ಓವರ್‌ನಲ್ಲಿ ಹೈದರಾಬಾದ್‌ನ ಪರ ಪ್ರಮುಖ ಬೌಲರ್ ಆಗಿದ್ದಾರೆ. ನೆಹ್ರಾಗೆ ಸದಾ ಕಾಲ ಗಾಯದ ಸಮಸ್ಯೆ ಕಾಡುತ್ತಿದ್ದು, ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 17 ಪಂದ್ಯಗಳಲ್ಲಿ ಕೇವಲ 8ರಲ್ಲಿ ಅಡಿದ್ದರು. ಈ ವರ್ಷ 14 ಪಂದ್ಯಗಳಲ್ಲಿ 6ರಲ್ಲಿ ಆಡಿದ್ದರು.
ಯುವರಾಜ್ ಸಿಂಗ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಬೆರಳು ನೋವಿಗೆ ಒಳಗಾಗಿದ್ದರು. ಯುವಿ ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಪರ್ಧಿಸಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.