×
Ad

ಪುಣೆ ತಂಡದ ಯಶಸ್ಸಿನ ರೂವಾರಿ ಮನೋಜ್ ತಿವಾರಿ

Update: 2017-05-17 23:39 IST

 ಮುಂಬೈ, ಮೇ 17: ಬಂಗಾಳದ ಬ್ಯಾಟ್ಸ್‌ಮನ್ ಮನೋಜ್ ತಿವಾರಿಗೆ 2017ನೆ ವರ್ಷ ಅದೃಷ್ಟದಾಯಕವಾಗಿದೆ. ಫೆಬ್ರವರಿಯಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಸೈಯದ್ ಮುಶ್ತಾಕ್ ಅಲಿ ಟ್ವೆಂಟಿ-20 ಫೈನಲ್‌ನಲ್ಲಿ ತಿವಾರಿ ನಾಯಕತ್ವದ ಉತ್ತರ ವಲಯ ತಂಡ ಪ್ರಶಸ್ತಿ ಜಯಿಸಿತ್ತು. ಕಳೆದ ವರ್ಷ ಗಾಯಗೊಂಡಿದ್ದ ಕಾರಣ ಐಪಿಎಲ್ ಟೂರ್ನಿಯಲ್ಲಿ ಆಡಿರಲಿಲ್ಲ. ಈ ವರ್ಷ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ತಿವಾರಿಯನ್ನು ಮೂರನೆ ಸುತ್ತಿನಲ್ಲಿ ಪುಣೆ ತಂಡ ಖರೀದಿಸಿತ್ತು.

ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ ನಡೆದಿದ್ದ ಕ್ವಾಲಿಫೈಯರ್-1 ಪಂದ್ಯದಲ್ಲಿ ಪುಣೆ ತಂಡ 20 ರನ್ ಗಳಿಂದ ಜಯ ಸಾಧಿಸಲು ಪ್ರಮುಖ ಪಾತ್ರವಹಿಸಿರುವ ತಿವಾರಿ 12 ಇನಿಂಗ್ಸ್‌ಗಳಲ್ಲಿ ಒಟ್ಟು 317 ರನ್ ಗಳಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಪುಣೆ ತಂಡ 9 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗೆ ಇಳಿದಿದ್ದ ತಿವಾರಿ 58 ರನ್ ಗಳಿಸಿದ್ದಲ್ಲದೆ ಆರಂಭಿಕ ಆಟಗಾರ ಅಜಿಂಕ್ಯ ರಹಾನೆಯೊಂದಿಗೆ 3ನೆ ವಿಕೆಟ್‌ಗೆ 80 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದರು.

ಬಂಗಾಳ ಕ್ರಿಕೆಟ್ ವಲಯದಲ್ಲಿ ‘ಚೋಟಾ ದಾದಾ’ ಎಂದೇ ಖ್ಯಾತಿ ಪಡೆದಿರುವ ಮನೋಜ್ ತಿವಾರಿ 10 ವರ್ಷಗಳ ಹಿಂದೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಮುಂಬೈ ವಿರುದ್ಧದ ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರವ್ ಗಂಗುಲಿ ಜೊತೆಗೂಡಿ ಬಂಗಾಳಕ್ಕೆ ಮಹತ್ವದ ಗೆಲುವು ತಂದುಕೊಟ್ಟಿದ್ದರು. ಮೊದಲ ಇನಿಂಗ್ಸ್‌ನಲ್ಲಿ 42 ಹಾಗೂ ಎರಡನೆ ಇನಿಂಗ್ಸ್‌ನಲ್ಲಿ 94 ರನ್ ಗಳಿಸಿದ್ದ ತಿವಾರಿ ಆಯ್ಕೆಗಾರರ ಗಮನ ಸೆಳೆಯಲು ಯಶಸ್ವಿಯಾಗಿದ್ದರು.

ಬಾಂಗ್ಲಾದೇಶ ವಿರುದ್ಧ ಬಾಂಗ್ಲಾದಲ್ಲಿ ನಡೆದಿದ್ದ ಏಕದಿನ ಸರಣಿಗೆ ಆಯ್ಕೆಯಾಗಿದ್ದ ತಿವಾರಿ ನೆಟ್ ಪ್ರಾಕ್ಟೀಸ್‌ನ ವೇಳೆಯೇ ಗಾಯಗೊಂಡು ಚೊಚ್ಚಲ ಪಂದ್ಯ ಆಡುವುದರಿಂದ ವಂಚಿತರಾಗಿದ್ದರು. ತಿವಾರಿ 2008ರಲ್ಲಿ ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಗೆ ಮತ್ತೊಮ್ಮೆ ತಂಡಕ್ಕೆ ಆಯ್ಕೆಯಾಗಿದ್ದರು. ಬ್ರಿಸ್ಬೇನ್‌ಗೆ ತಲುಪಿದ ಕೆಲವೇ ಗಂಟೆಗಳಲ್ಲಿ ಆಸ್ಟ್ರೇಲಿಯ ವಿರುದ್ಧ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದ ತಿವಾರಿ ಅವರು ಬ್ರೆಟ್‌ಲೀ ಯಾರ್ಕರ್‌ನ್ನು ಎದುರಿಸಲಾಗದೇ ಕ್ಲೀನ್‌ಬೌಲ್ಡ್ ಆಗಿದ್ದರು.

ಆ ಬಳಿಕ ತಿವಾರಿ ಭಾರತ ತಂಡದಲ್ಲಿ ಹೆಚ್ಚು ಅವಕಾಶ ಪಡೆಯಲಿಲ್ಲ. ಕಳೆದ 9 ವರ್ಷಗಳಲ್ಲಿ ಕೇವಲ 12 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2015ರ ಜುಲೈನಲ್ಲಿ ಝಿಂಬಾಬ್ವೆ ವಿರುದ್ಧ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದರು. 2011ರಲ್ಲಿ ಈಡನ್‌ಗಾರ್ಡನ್ಸ್‌ನಲ್ಲಿ ವೆಸ್ಟ್‌ಇಂಡೀಸ್‌ನ ವಿರುದ್ಧ 100 ರನ್ ಗಳಿಸಿ ತಂಡಕ್ಕೆ ಗೆಲುವು ತಂದಿದ್ದರು. ಆದರೆ ಅವರ ಈ ಇನಿಂಗ್ಸ್‌ನಲ್ಲಿ ಯಾರೂ ನೆನಪಿಟ್ಟುಕೊಂಡಿಲ್ಲ.

ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿರುವ ತಿವಾರಿ 2012ರಲ್ಲಿ ಚೆನ್ನೈನಲ್ಲಿ ನಡೆದ ಚೆನ್ನೈ ವಿರುದ್ಧದ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತಾದ ಪರ ಗೆಲುವಿನ ರನ್ ದಾಖಲಿಸಿದ್ದರು. ವಾಂಖೆಡೆ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ ಕ್ವಾಲಿಫೈಯರ್-1ರಲ್ಲಿ ತಿವಾರಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ತೋರಿಸಿದ್ದಾರೆ.

ರೌಂಡ್‌ರಾಬಿನ್ ಲೀಗ್ ಹಂತದಲ್ಲಿ ಮುಂಬೈ ವಿರುದ್ಧ 13 ಎಸೆತಗಳಲ್ಲಿ 22 ರನ್ ಗಳಿಸಿದ್ದ ತಿವಾರಿ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 11 ಎಸೆತಗಳಲ್ಲಿ 27 ರನ್ ಗಳಿಸಿದ್ದರು. ಮೊದಲ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಸೋತಿದ್ದ ಪುಣೆ ತಂಡ ಗೆಲುವಿನ ಹಳಿಗೆ ಮರಳಲು ನೆರವಾಗಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ಪುಣೆ ಕಳೆದ 11 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News