×
Ad

ಹಾಕಿ ಟೆಸ್ಟ್ ಸರಣಿ: ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ‘ಹ್ಯಾಟ್ರಿಕ್’ ಸೋಲು

Update: 2017-05-17 23:56 IST

ಹ್ಯಾಮಿಲ್ಟನ್, ಮೇ 17: ಭಾರತದ ಮಹಿಳಾ ಹಾಕಿ ತಂಡ ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ‘ಹ್ಯಾಟ್ರಿಕ್’ ಸೋಲು ಅನುಭವಿಸಿದೆ.

ಬುಧವಾರ ಇಲ್ಲಿ ನಡೆದ ಮೂರನೆ ಪಂದ್ಯದಲ್ಲಿ ಕೊನೆಯ ತನಕ ಹೋರಾಟ ನೀಡಿದ್ದ ಭಾರತ ತಂಡ ಆತಿಥೇಯ ಕಿವೀಸ್ ವಿರುದ್ಧ 2-3 ಅಂತರದಿಂದ ಶರಣಾಗಿತ್ತು. ಮಂಗಳವಾರ ನಡೆದಿದ್ದ ಎರಡನೆ ಪಂದ್ಯದಲ್ಲಿ 8-2 ಅಂತರದಿಂದ ಜಯ ಸಾಧಿಸಿದ್ದ ನ್ಯೂಝಿಲೆಂಡ್ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಪ್ರವಾಸಿ ಭಾರತ ತಂಡ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿತು. 9ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ದೀಪ್ ಗ್ರೇಸ್ ಎಕ್ಕಾ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

 13ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದ ನ್ಯೂಝಿಲೆಂಡ್‌ನ ಗನ್ಸನ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

 15ನೆ ನಿಮಿಷದಲ್ಲಿ 2ನೆ ಗೋಲು ಬಾರಿಸಿದ ನ್ಯೂಝಿಲೆಂಡ್ 2-1 ಮುನ್ನಡೆ ಸಾಧಿಸಿತು. ಭಾರತ 26ನೆ ನಿಮಿಷದಲ್ಲಿ ಸ್ಕೋರನ್ನು ಸಮಬಲಗೊಳಿಸಲು ಸತತ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ನ್ಯೂಝಿಲೆಂಡ್ ಇದಕ್ಕೆ ಅವಕಾಶ ನೀಡಲಿಲ್ಲ.

 ನ್ಯೂಝಿಲೆಂಡ್ 39ನೆ ನಿಮಿಷದಲ್ಲಿ ಮೂರನೆ ಗೋಲು ಬಾರಿಸಿ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿತು. 59ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ರಾಣಿ ನೆರವಿನಿಂದ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದ ಮೋನಿಕಾ ಭಾರತದ ಸೋಲಿನ ಅಂತರವನ್ನು ತಗ್ಗಿಸಿದರು.

ಉಭಯ ತಂಡಗಳು ಮೇ 19 ರಂದು ನಾಲ್ಕನೆ ಪಂದ್ಯವನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News