×
Ad

ಶುಮಾಕರ್ ಮಕ್ಕಳಿಗೆ ಜೀವಬೆದರಿಕೆ: ಆರೋಪಿಗೆ ಜೈಲು ಸಜೆ

Update: 2017-05-19 23:47 IST

ಬರ್ಲಿನ್, ಮೇ 19: ಫಾರ್ಮುಲಾ ವನ್ ದಂತಕತೆ ಮೈಕಲ್ ಶುಮಾಕರ್‌ರ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾ ಬ್ಲಾಕ್‌ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಜರ್ಮನಿ ನ್ಯಾಯಾಲಯ ಜೈಲು ಶಿಕ್ಷೆಯೊಂದಿಗೆ 4,500 ಯುರೋ ದಂಡವನ್ನು ವಿಧಿಸಿದೆ. ಮನೋವೈದ್ಯರ ಸಹಾಯ ಪಡೆಯುವಂತೆಯೂ ಆರೋಪಿಗೆ ಆದೇಶಿಸಿದೆ.

‘‘2016ರ ಮಾ.31ರೊಳಗೆ ತನಗೆ ಹಣವನ್ನು ನೀಡದೇ ಇದ್ದರೆ ನಿಮ್ಮ ಮಕ್ಕಳನ್ನು ಕೊಂದುಹಾಕುವೆ. ಫಾರ್ಮುಲಾ-4ರಲ್ಲಿ ಯಾವಾಗಲೂ ಅಪಘಾತಗಳು ನಡೆಯುತ್ತಿರುತ್ತವೆ’ ಎಂದು 25ರ ಅಪರಿಚಿತ ಯುವಕನೊಬ್ಬ ಶುಮಾಕರ್ ಪತ್ನಿಗೆ 2016ರ ಫೆಬ್ರವರಿಯಲ್ಲಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದ.

ಇದೀಗ ಫಾರ್ಮುಲಾ-3ರಲ್ಲಿ ಸ್ಪರ್ಧಿಸುತ್ತಿರುವ ಶುಮಾಕರ್ ಪುತ್ರ ಮೈಕ್(18 ವರ್ಷ)ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಒಡ್ಡಿದ್ದ ಸಂದರ್ಭದಲ್ಲಿ ಫಾರ್ಮುಲಾ-4ರಲ್ಲಿ ಸ್ಪರ್ಧಿಸುತ್ತಿದ್ದ. ಶುಮಾಕರ್‌ರ 20ರ ಹರೆಯದ ಪುತ್ರಿ ಜಿನಾ-ಮರಿಯಾ ಉತ್ತಮ ರೈಡರ್ ಆಗಿದ್ದಾರೆ.

ಶುಮಾಕರ್ ಪತ್ನಿ ಕೊರಿನಾಗೆ ಕಳುಹಿಸಿದ್ದ ಇ-ಮೇಲ್‌ನಲ್ಲಿ ಅಪರಿಚಿತ ವ್ಯಕ್ತಿ ತನ್ನ ಬ್ಯಾಂಕ್ ವಿವರಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಆರೋಪಿಯನ್ನು ಬೇಗನೆ ಹಚ್ಚಲು ಸಾಧ್ಯವಾಯಿತು.

 48ರ ಪ್ರಾಯದ ಶುಮಾಕರ್ ತನ್ನ ವೃತ್ತಿಜೀವನದಲ್ಲಿ ಏಳು ವಿಶ್ವ ಪ್ರಶಸ್ತಿಗಳನ್ನು ಜಯಿಸಿದ್ದಾರೆ. 2013ರ ಡಿಸೆಂಬರ್‌ನಲ್ಲಿ ನಡೆದ ಸ್ಕೈಯಿಂಗ್ ದುರಂತದಲ್ಲಿ ಶುಮಾಕರ್ ತಲೆಗೆ ಗಂಭೀರ ಗಾಯವಾಗಿದ್ದು, ಅವರೀಗ ಕೋಮಾಸ್ಥಿತಿಯಲ್ಲಿದ್ದಾರೆ. ಶುಮಾಕರ್ ಕುಟುಂಬದವರು ಹಾಗೂ ಮ್ಯಾನೇಜರ್, ಶುಮಾಕರ್ ಆರೋಗ್ಯದ ಸ್ಥಿತಿಯ ಬಗ್ಗೆ ಯಾವುದೇ ವಿವರವನ್ನು ನೀಡುತ್ತಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News