ಮಹಿಳಾ ಹಾಕಿ ಟೆಸ್ಟ್: ಭಾರತಕ್ಕೆ ಸತತ ನಾಲ್ಕನೆ ಸೋಲು

Update: 2017-05-19 18:23 GMT

ಹೊಸದಿಲ್ಲಿ, ಮೇ 19: ಕಳಪೆ ಪ್ರದರ್ಶನ ಮುಂದುವರಿಸಿದ ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ನಡೆದ ನ್ಯೂಝಿಲೆಂಡ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯದಲ್ಲೂ ಸೋತಿದೆ. ಭಾರತ ವಿರುದ್ಧ ಪ್ರಾಬಲ್ಯ ಸಾಧಿಸಿರುವ ನ್ಯೂಝಿಲೆಂಡ್ ಐದು ಪಂದ್ಯಗಳ ಹಾಕಿ ಟೆಸ್ಟ್ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ.

ಮೊದಲ ಮೂರು ಪಂದ್ಯಗಳಲ್ಲಿ 4-1, 8-2 ಹಾಗೂ 3-2 ಅಂತರದಿಂದ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಕಿವೀಸ್ ಶುಕ್ರವಾರದ ಪಂದ್ಯದಲ್ಲೂ ಮೇಲುಗೈ ಸಾಧಿಸಿತು.

ರಾಚೆಲ್ ಮೆಕ್‌ಕಾನ್ 14ನೆ ನಿಮಿಷದಲ್ಲಿ ಗೋಲು ಬಾರಿಸುವುದರೊಂದಿಗೆ ನ್ಯೂಝಿಲೆಂಡ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. 17ನೆ ನಿಮಿಷದಲ್ಲಿ ಗೋಲು ಬಾರಿಸಿದ ಟೆಸ್ಸಾ ಜೊಪ್ಪ್ ಆತಿಥೇಯರ ಪರ ಎರಡನೆ ಗೋಲು ಬಾರಿಸಿದರು.

26ನೆ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಮೆಕ್‌ಕಾನ್ ಕಿವೀಸ್‌ನ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು. ಮೊದಲಾರ್ಧ ಕೊನೆಗೊಂಡಾಗ ನ್ಯೂಝಿಲೆಂಡ್ 3-0 ಮುನ್ನಡೆಯಲ್ಲಿತ್ತು.

ದ್ವಿತೀಯಾರ್ಧದಲ್ಲಿ ಭಾರತದ ಗೋಲ್‌ಕೀಪರ್ ರಜನಿ ನ್ಯೂಝಿಲೆಂಡ್‌ಗೆ ಇನ್ನಷ್ಟು ಗೋಲು ಬಾರಿಸಲು ತಡೆಯಾದರು. ಭಾರತ ದ್ವಿತೀಯಾರ್ಧದಲ್ಲಿ ಎದುರಾಳಿಗೆ ಗೋಲು ಬಾರಿಸಲು ನಿರಾಕರಿಸಿದರೂ ಕಿವೀಸ್ 3-0 ಅಂತರದಿಂದ ಜಯ ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News