ಇಟಲಿಗೆ ಸೋಲುಣಿಸಿದ ಭಾರತದ ಕಿರಿಯರ ಫುಟ್ಬಾಲ್ ತಂಡ

Update: 2017-05-20 10:39 GMT

ರೋಮ್, ಮೇ 20: ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯದಲ್ಲಿ ಭಾರತದ ಅಂಡರ್-17 ವಿಶ್ವಕಪ್ ಫುಟ್ಬಾಲ್ ತಂಡ ಆತಿಥೇಯ ಇಟಲಿ ತಂಡವನ್ನು 2-0 ಅಂತರದಿಂದ ಮಣಿಸಿ ಗಮನಾರ್ಹ ಸಾಧನೆ ಮಾಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಪರ ಅಭಿಜಿತ್ ಸರ್ಕಾರ್(31ನೆ ನಿಮಿಷ) ಹಾಗೂ ರಾಹುಲ್ ಪ್ರವೀಣ್(80ನೆ ನಿಮಿಷ)ತಲಾ ಒಂದು ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದರು.

 ಅ.6 ರಿಂದ 28ರ ತನಕ ಭಾರತದ ಹೊಸದಿಲ್ಲಿ, ಮುಂಬೈ, ಕೋಲ್ಕತಾ ಗೋವಾ, ಗುವಾಹಟಿ ಹಾಗೂ ಕೊಚ್ಚಿಯಲ್ಲಿ ಇದೇ ಮೊದಲ ಬಾರಿ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿ ಫಿಫಾ ವಿಶ್ವಕಪ್ ನಡೆಯಲಿದೆ. ಈ ಟೂರ್ನಿಗೆ ಸಜ್ಜಾಗುವ ಉದ್ದೇಶದಿಂದ ಭಾರತದ ಅಂಡರ್-17 ಫುಟ್ಬಾಲ್ ತಂಡ ಪ್ರಸ್ತುತ ಯುರೋಪ್ ಪ್ರವಾಸಕೈಗೊಂಡಿದೆ.

ಭಾರತದ ಆಟಗಾರರು ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು. ಹಲವು ಅವಕಾಶವನ್ನು ಪಡೆದಿದ್ದರು. ಕ್ರಮವಾಗಿ 8ನೆ ಹಾಗೂ 13ನೆ ನಿಮಿಷದಲ್ಲಿ ಕೋಮಲ್ ಹಾಗೂ ಅಂಕಿತ್ ಗೋಲು ಬಾರಿಸಲು ವಿಫಲಯತ್ನ ನಡೆಸಿದರು. ಆದರೆ, ಎದುರಾಳಿ ತಂಡದ ಗೋಲ್‌ಕೀಪರ್ ಈ ಇಬ್ಬರು ಆಟಗಾರರ ಪ್ರಯತ್ನವನ್ನು ವಿಫಲಗೊಳಿಸಿದರು.
 31ನೆ ನಿಮಿಷದಲ್ಲಿ ಇಟಲಿಯ ರಕ್ಷಣಾಕೋಟೆಯನ್ನು ಭೇದಿಸಿದ ಅಭಿಷೇಕ್ ಸರ್ಕಾರ್ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. 59ನೆ ನಿಮಿಷದಲ್ಲಿ ಅಂಕಿತ್ ಮತ್ತೊಂದು ಅವಕಾಶವನ್ನು ಕೈಚೆಲ್ಲಿದರು. 75ನೆ ನಿಮಿಷದಲ್ಲಿ ರಾಹುಲ್ ಸ್ಕೋರ್ ಗಳಿಸುವ ಸನಿಹಕ್ಕೆ ತಲುಪಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.
80ನೆ ನಿಮಿಷದಲ್ಲಿ ಇಟಲಿಯ ಪೆನಾಲ್ಟಿ ಬಾಕ್ಸ್ ಒಳಗಿಂದ ಗೋಲು ಬಾರಿಸಿದ ರಾಹುಲ್ ಭಾರತಕ್ಕೆ 2-0 ಅಂತರದ ಗೆಲುವು ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News