ಭಾರತದ ಅಂಡರ್-17 ಫುಟ್ಬಾಲ್ ತಂಡ ನಿಜವಾಗಿಯೂ ಇಟಲಿ ತಂಡವನ್ನು ಸೋಲಿಸಿತೇ?

Update: 2017-05-21 05:58 GMT

  ರೋಮ್, ಮೇ 21: ಭಾರತದ ಫಿಫಾ ಅಂಡರ್-17 ವಿಶ್ವಕಪ್ ತಂಡ ಶುಕ್ರವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಇಟಲಿಯ ನ್ಯಾಶನಲ್ ಅಂಡರ್-17 ತಂಡವನ್ನು 2-0 ಅಂತರದಿಂದ ಮಣಿಸಿ ಐತಿಹಾಸಿಕ ಸಾಧನೆ ಮಾಡಿತ್ತು ಎಂದು ವರದಿಯಾಗಿತ್ತು. ಆದರೆ, ಭಾರತದ ಕಿರಿಯರ ತಂಡ ಇಟಲಿಯ ಯಾವ ತಂಡವನ್ನು ಮಣಿಸಿತ್ತು ಎಂಬ ಕುರಿತು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ತಪ್ಪು ಮಾಹಿತಿ ನೀಡಿ ಎಡವಟ್ಟು ಮಾಡಿದೆ.

ಭಾರತದಲ್ಲಿ ನಡೆಯಲಿರುವ ಅಂಡರ್-17 ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ಭಾರತದ ಕಿರಿಯರ ತಂಡ ನಿಜವಾಗಿಯೂ ಇಟಲಿಯ ರಾಷ್ಟ್ರೀಯ ಅಂಡರ್-17 ತಂಡವನ್ನು ಮಣಿಸಿಲ್ಲ. ಆದರೆ, ಇಟಲಿಯ ಲಿಗಾ ಪ್ರೊ ಅಂಡರ್-17 ರೆಪ್ರೆಸೆಂಟೇಟಿವ್ ತಂಡವನ್ನು ಸೋಲಿಸಿತ್ತು. ಈ ತಂಡದಲ್ಲಿ ಲಿಗಾ ಪ್ರೊ ಹಾಗೂ ಲಿಗಾ ಪ್ರೊ ಕ್ಲಬ್‌ಗಳ ಆಟಗಾರರು ಭಾರತ ವಿರುದ್ಧ ಆಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಎಐಎಫ್‌ಎಫ್ ಎದುರಾಳಿ ತಂಡದ ಬಗ್ಗೆ ಮಾಹಿತಿ ನೀಡುವ ವಿಷಯದಲ್ಲಿ ತಪ್ಪು ಮಾಹಿತಿ ನೀಡಿರುವುದು ಬಹಿರಂಗವಾಗಿದೆ.

ಭಾರತದ ಅಂಡರ್-17 ತಂಡ ಇಟಲಿಯ ಅಂಡರ್-17 ತಂಡವನ್ನು ಮಣಿಸಿತು ಎಂಬ ಸುದ್ದಿ ಹೊರಬರುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಕಿರಿಯ ಆಟಗಾರರಿಗೆ ಸೆಲೆಬ್ರಿಟಿಗಳು, ಎಐಎಫ್‌ಎಫ್ ಸೇರಿದಂತೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿತ್ತು. ಭಾರತ ತಂಡ ಇಟಲಿಯಲ್ಲಿ ಇಟಲಿ ತಂಡವನ್ನು ಮಣಿಸಿತು ಎಂಬ ಹೆಮ್ಮೆಗಿಂತಲೂ ಮಿಗಿಲಾಗಿ ಮುಂಬರುವ ಅಕ್ಟೋಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲಿದೆಯೆಂಬ ಬಗ್ಗೆ ಫುಟ್ಬಾಲ್ ಅಭಿಮಾನಿಗಳಲ್ಲಿ ವಿಶ್ವಾಸ ಮೂಡಿತ್ತು. ಆದರೆ, ಇದೀಗ ಸತ್ಯ ಬೆಳಕಿಗೆ ಬಂದ ಬಳಿಕ ಎಲ್ಲ ವಿಶ್ವಾಸ-ಉತ್ಸಾಹ ಕಡಿಮೆಯಾಗಿದೆ.

ಭಾರತ ತಂಡ ಇಟಲಿಯಲ್ಲಿ ಅಂಡರ್-17 ನ್ಯಾಶನಲ್ ತಂಡವನ್ನು ಮಣಿಸಿದೆ ಎಂದು ತಪ್ಪು ಮಾಹಿತಿ ನೀಡಿದ್ದ ಎಐಎಫ್‌ಎಫ್ ಇದೊಂದು ಭಾರತೀಯ ಫುಟ್ಬಾಲ್‌ನಲ್ಲಿ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿತ್ತು. ಫುಟ್ಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಹೇಳಿಕೊಂಡಿತ್ತು.

ಇಟಲಿ ಫುಟ್ಬಾಲ್ ಫೆಡರೇಶನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಂದ್ಯ ಆರಂಭ ಹಾಗೂ ಅಂತ್ಯವಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಭಾರತ ತಂಡ ಇಟಲಿಯ ಅಂಡರ್-17 ತಂಡವನ್ನು ಮಣಿಸಿದೆ ಎಂಬ ಕುರಿತು ಮಾಧ್ಯಮ ವರದಿಯಿಂದ ಅಚ್ಚರಿಗೊಂಡಿರುವ ಇಟಲಿ ಫುಟ್ಬಾಲ್ ಪತ್ರಕರ್ತ ಇಮ್ಯಾನುಯೆಲ್,‘‘ಇದೊಂದು ಆಶ್ಚರ್ಯಕರ ಸುದ್ದಿ. ಇಟಲಿಯ ಮಾಧ್ಯಮಗಳಲ್ಲಿ ಈ ಪಂದ್ಯದ ಬಗ್ಗೆ ಯಾವುದೇ ವರದಿಯಾಗಿಲ್ಲ. ಭಾರತ ತಂಡ ಇಟಲಿಯ ಅಂಡರ್-17ರ ಲಿಗಾ ಪ್ರೊ ನ್ಯಾಶನಲ್ ರೆಪ್ರೆಸೆಂಟೇಟಿವ್ ವಿರುದ್ಧ ಆಡಿತ್ತು. ಇಟಲಿಯ ಅಂಡರ್-17 ನ್ಯಾಶನಲ್ ತಂಡದ ವಿರುದ್ಧ ಆಡಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News