ರಿಯಲ್ ಮ್ಯಾಡ್ರಿಡ್ ಮಡಿಲಿಗೆ 33ನೆ ಲಾ ಲಿಗ ಟ್ರೋಫಿ

Update: 2017-05-22 18:03 GMT

ಮ್ಯಾಡ್ರಿಡ್, ಮೇ 22: ಮಲಾಗ ತಂಡವನ್ನು 2-0 ಅಂತರದಿಂದ ಮಣಿಸಿದ ರಿಯಲ್ ಮ್ಯಾಡ್ರಿಡ್ ತಂಡ ಐದು ವರ್ಷಗಳ ಕಾಯುವಿಕೆಯ ಬಳಿಕ 33ನೆ ಬಾರಿ ಪ್ರತಿಷ್ಠಿತ ಲಾಲಿಗ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಮ್ಯಾಡ್ರಿಡ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ 2ನೆ ನಿಮಿಷದಲ್ಲಿ 1-0 ಮುನ್ನಡೆ ಒದಗಿಸಿಕೊಟ್ಟರು. ರೊನಾಲ್ಡೊ ಈ ಋತುವಿನಲ್ಲಿ 40ನೆ ಗೋಲು ಬಾರಿಸಿದರು.

ದ್ವಿತೀಯಾರ್ಧದ 55ನೆ ನಿಮಿಷದಲ್ಲಿ ಗೋಲು ಬಾರಿಸಿದ ಕರೀಂ ಬೆಂಝೆಮಾ ಮ್ಯಾಡ್ರಿಡ್ ತಂಡ ಐದು ವರ್ಷಗಳ ನಂತರ ಮೊದಲ ಬಾರಿ ಲಾಲಿಗ ಪ್ರಶಸ್ತಿಯನ್ನು ಬಾಚಿಕೊಳ್ಳಲು ಕಾರಣರಾದರು. ಮ್ಯಾಡ್ರಿಡ್‌ಗೆ ಪ್ರಶಸ್ತಿ ದೃಢಪಡಿಸಿಕೊಳ್ಳಲು ಪಂದ್ಯವನ್ನು ಡ್ರಾಗೊಳಿಸಬೇಕಾದ ಅಗತ್ಯವಿತ್ತು. ಪಂದ್ಯ ಆರಂಭವಾದ ತಕ್ಷಣವೇ ಗೋಲು ಬಾರಿಸಿದ ರೊನಾಲ್ಡೊ ಮ್ಯಾಡ್ರಿಡ್‌ಗೆ ಪ್ರಶಸ್ತಿ ದೃಢಪಡಿಸಿದರು.

38 ಪಂದ್ಯಗಳಲ್ಲಿ ಒಟ್ಟು 93 ಅಂಕ ಗಳಿಸಿದ ಮ್ಯಾಡ್ರಿಡ್ ತಂಡ ಲಾಲಿಗ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. 90 ಅಂಕ ಗಳಿಸಿದ ಕಳೆದ ವರ್ಷದ ಚಾಂಪಿಯನ್ ಬಾರ್ಸಿಲೋನ ತಂಡ 2ನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಒಟ್ಟು 37 ಗೋಲುಗಳನ್ನು ಬಾರಿಸಿದ ಬಾರ್ಸಿಲೋನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಲೂಯಿಸ್ ಸುಯರೆಝ್(29) ಹಾಗೂ ರೊನಾಲ್ಡೊ(25) ಉಳಿದೆರಡು ಸ್ಥಾನಗಳನ್ನು ಪಡೆದರು.

‘‘ಆಟಗಾರನಾಗಿ ಹಲವು ಸ್ಮರಣೀಯ ಕ್ಷಣವನ್ನು ಅನುಭವಿಸಿರುವ ನನಗೆ ಇದು ವೃತ್ತಿಜೀವನದಲ್ಲಿ ಅತ್ಯಂತ ಸಂತೋಷದ ದಿನವಾಗಿದೆ. ಮ್ಯಾಡ್ರಿಡ್ ಕ್ಲಬ್‌ನಲ್ಲಿ ನಾನು ಎಲ್ಲವನ್ನೂ ಗೆದ್ದುಕೊಂಡಿರುವೆ. ಲಾಲಿಗ ಪ್ರಶಸ್ತಿ ಜಯಿಸಿರುವುದು ಎಲ್ಲದಕ್ಕಿಂತಲೂ ಶ್ರೇಷ್ಠದ್ದಾಗಿದೆ’’ಎಂದು ರಿಯಲ್ ಮ್ಯಾಡ್ರಿಡ್ ಕೋಚ್ ಝೈನುದ್ದೀನ್ ಝಿದಾನೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News