ಕೇರಳ ರಣಜಿ ತಂಡಕ್ಕೆ ರಾಬಿನ್ ಉತ್ತಪ್ಪ?
ಕೊಚ್ಚಿ, ಮೇ 23: ಈ ವರ್ಷದ ರಣಜಿ ಟ್ರೋಫಿ ಋತುವಿನಲ್ಲಿ ರಾಬಿನ್ ಉತ್ತಪ್ಪ ಕೇರಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಕುರಿತು ಆದಷ್ಟು ಬೇಗನೆ ಘೋಷಣೆ ಮಾಡಲಾಗುವುದು ಎಂದು ಕೇರಳ ಕ್ರಿಕೆಟ್ ಸಂಸ್ಥೆಯ(ಕೆಸಿಎ) ಕಾರ್ಯದರ್ಶಿ ಜಯೇಶ್ ಜಾರ್ಜ್ ಮಂಗಳವಾರ ತಿಳಿಸಿದ್ದಾರೆ.
‘‘ಅಧಿಕೃತ ಮಾತುಕತೆ ನಡೆಯುತ್ತಿದೆ. ಈ ವಾರ ಉತ್ತಪ್ಪರನ್ನು ಕೇರಳ ರಣಜಿ ತಂಡಕ್ಕೆ ಆಯ್ಕೆ ಮಾಡುವ ಕುರಿತು ಘೋಷಣೆ ಮಾಡಲಾಗುವುದು. ಉತ್ತಪ್ಪ ಆರ್‌ಸಿಬಿ ವಿರುದ್ಧ ಐಪಿಎಲ್ ಪಂದ್ಯವಾಡಲು ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಕೆಸಿಎನ ಮಾಜಿ ಅಧ್ಯಕ್ಷ ಕೆಸಿ ಮ್ಯಾಥ್ಯೂ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತ ‘ಎ’ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದ ವೇಳೆ ತಂಡದ ಮ್ಯಾನೇಜರ್ ಆಗಿದ್ದ ಮ್ಯಾಥ್ಯೂಸ್ ಅವರು ಉತ್ತಪ್ಪರೊಂದಿಗೆ ಮೊದಲ ಬಾರಿ ಈ ಕುರಿತು ಮಾತುಕತೆ ನಡೆಸಿದ್ದರು. ಅವರು ಕೇರಳ ರಣಜಿ ತಂಡಕ್ಕೆ ಬರಲು ಆಸಕ್ತಿ ತೋರಿದ್ದಾರೆ. ನಾವು ಕೂಡ ಅವರನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದೇವೆ’’ ಎಂದು ಜಾರ್ಜ್ ತಿಳಿಸಿದರು.
2002ರಲ್ಲಿ ಕಿರಿಯ ವಯಸ್ಸಿನಲ್ಲಿ ರಣಜಿಗೆ ಪಾದಾರ್ಪಣೆಗೈದಿರುವ ಉತ್ತಪ್ಪ ಈವರೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಈಗ ಕೊನೆಗೊಂಡಿರುವ ಐಪಿಎಲ್‌ನಲ್ಲಿ ಕೆಕೆಆರ್‌ನ ಪರ 388 ರನ್ ಗಳಿಸಿದ್ದಾರೆ.