ಸುದಿರ್‌ಮನ್ ಕಪ್: ಇಂಡೋನೇಷ್ಯವನ್ನು ಮಣಿಸಿದ ಭಾರತ
ಗೋಲ್ಡ್ ಕೋಸ್ಟ್(ಆಸ್ಟ್ರೇಲಿಯ), ಮೇ 23: ಮಾಜಿ ಚಾಂಪಿಯನ್ ಇಂಡೋನೇಷ್ಯ ವಿರುದ್ಧ ಪ್ರಾಬಲ್ಯ ಮೆರೆದ ಭಾರತ ತಂಡ ಸುದಿರ್‌ಮನ್ ಕಪ್ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ನಾಕೌಟ್ ಹಂತಕ್ಕೇರುವ ವಿಶ್ವಾಸ ಹೆಚ್ಚಿಸಿಕೊಂಡಿದೆ.
ಇಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಇಂಡೋನೇಷ್ಯದ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿತು. ಸೋಮವಾರ ನಡೆದಿದ್ದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಡೆನ್ಮಾರ್ಕ್‌ನ ವಿರುದ್ಧ 1-4 ರಿಂದ ಸೋತು ಹಿನ್ನಡೆ ಅನುಭವಿಸಿತ್ತು. ಟೂರ್ನಿಯಲ್ಲಿ ಸ್ಪರ್ಧೆಯಲ್ಲಿರಲು 5ನೆ ಶ್ರೇಯಾಂಕದ ಇಂಡೋನೇಷ್ಯದ ವಿರುದ್ಧ ಗೆಲ್ಲಲೇಬೇಕಾಗಿತ್ತು.
ಭಾರತದ ಪರ ಕೆ.ಶ್ರೀಕಾಂತ್, ಪಿ.ವಿ.ಸಿಂಧು ಸಿಂಗಲ್ಸ್‌ನಲ್ಲಿ ಜಯ ಸಾಧಿಸಿದರೆ,ಹಿರಿಯ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಎಸ್.ರಾಂಕಿ ರೆಡ್ಡಿ ಹಾಗೂ ಸಿಕ್ಕಿ ರೆಡ್ಡಿ ಜೊತೆಗೂಡಿ ಕ್ರಮವಾಗಿ ಮಿಶ್ರ ಡಬಲ್ಸ್ ಹಾಗೂ ಮಹಿಳೆಯರ ಡಬಲ್ಸ್ ಪಂದ್ಯವನ್ನು ಜಯಿಸಿದರು.
ದಿನದ ಮೊದಲ ಪಂದ್ಯದಲ್ಲಿ ಎಸ್.ರಾಂಕಿ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಅವರು ಮಿಶ್ರಡಬಲ್ಸ್‌ನಲ್ಲಿ ಟಾಂಟೊವಿ ಅಹ್ಮದ್ ಹಾಗೂ ಗ್ಲೊರಿಯ ಇಮಾನ್ಯೆುಲ್‌ರನ್ನು 22-20, 17-21, 21-19 ಅಂಕಗಳ ಅಂತರದಿಂದ ಮಣಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಅವರು ಜೋನಾಥನ್ ಕ್ರಿಸ್ಟಿ ಅವರನ್ನು 21-15, 21-16 ಅಂಕಗಳ ಅಂತರದಿಂದ ಸೋಲಿಸಿ ಭಾರತದ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.
ಎಸ್.ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಮಾರ್ಕಸ್ ಫೆರ್ನಾಲ್ಡಿ ಹಾಗೂ ಕೆವಿನ್ ಸಂಜಯ ಸುಕಮುಲ್ಜೊ ವಿರುದ್ಧ 9-21, 17-21 ರಿಂದ ಸೋತರು. ಇಂಡೋನೇಷ್ಯ ಒಂದು ಅಂಕ ಪಡೆಯಿತು.
42 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್‌ನಲ್ಲಿ ಇಂಡೋನೇಷ್ಯದ ಫಿಟ್ರಿಯಾನಿಯವರನ್ನು 21-9, 21-9 ಮಣಿಸಿದ ಪಿ.ವಿ.ಸಿಂಧು ಭಾರತಕ್ಕೆ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಒದಗಿಸಿಕೊಟ್ಟರು. ಐದನೆ ಹಾಗೂ ಅಂತಿಮ ಪಂದ್ಯದಲ್ಲಿ ಅಶ್ವಿನಿ ಹಾಗೂ ಸಿಕ್ಕಿ ರೆಡ್ಡಿ ಜೋಡಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಡೆಲ್ಲಾ ಡೆಸ್ಟಿಯರ ಹಾಗೂ ರಸಿಟಾರನ್ನು 21-12, 21-19 ಅಂಕಗಳ ಅಂತರದಿಂದ ಮಣಿಸಿ ಭಾರತಕ್ಕೆ 4-1 ಅಂತರದ ಗೆಲುವು ತಂದುಕೊಟ್ಟರು.
ಇದೀಗ ಭಾರತ ಹಾಗೂ ಡೆನ್ಮಾರ್ಕ್ ತಂಡಗಳು ತಲಾ ಒಂದು ಅಂಕ ಗಳಿಸಿವೆ. ಬುಧವಾರ ಇಂಡೊನೇಷ್ಯ ಹಾಗೂ ಡೆನ್ಮಾರ್ಕ್ ನಡುವಿನ ಪಂದ್ಯದ ಬಳಿಕ ನಾಕೌಟ್ ಸ್ಥಾನ ನಿರ್ಧಾರವಾಗಲಿದೆ.
9ನೆ ಶ್ರೇಯಾಂಕದ ಭಾರತ 2011ರ ಆವೃತ್ತಿಯಲ್ಲಿ ಮಾತ್ರ ನಾಕೌಟ್ ಹಂತಕ್ಕೆ ತಲುಪಲು ಯಶಸ್ವಿಯಾಗಿತ್ತು. ಕಳೆದ ಎರಡು ಆವೃತ್ತಿಗಳಲ್ಲಿ ಗ್ರೂಪ್ ಹಂತ ದಾಟಲು ಸಾಧ್ಯವಾಗಿರಲಿಲ್ಲ