ಚಾಂಪಿಯನ್ಸ್ ಟ್ರೋಫಿ ಭದ್ರತಾ ವ್ಯವಸ್ಥೆ ಪರಿಶೀಲಿಸಲು ಐಸಿಸಿ ನಿರ್ಧಾರ

Update: 2017-05-23 18:05 GMT

ದುಬೈ, ಮೇ 23: ಮ್ಯಾಂಚೆಸ್ಟರ್ ಅರೆನಾದಲ್ಲಿ ಸೋಮವಾರ ಬಾಂಬ್ ಸ್ಫೋಟ ಸಂಭವಿಸಿ 22 ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಮಾಡಲಾಗಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ನಿರ್ಧರಿಸಿದೆ.

‘‘ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಐಸಿಸಿ ಮಹಿಳೆಯರ ವಿಶ್ವಕಪ್‌ನ ಸುರಕ್ಷತೆ ಹಾಗೂ ಭದ್ರತೆಯು ಐಸಿಸಿ ಹಾಗೂ ಇಸಿಬಿಯ ಮೊದಲ ಆದ್ಯತೆಯಾಗಿದೆ. ಎರಡೂ ಟೂರ್ನಮೆಂಟ್‌ಗಳಲ್ಲಿ ಭದ್ರತೆಯನ್ನು ದೃಢಪಡಿಸಿಕೊಳ್ಳಲು ನಮ್ಮ ಟೂರ್ನಮೆಂಟ್‌ನ ಭದ್ರತಾ ನಿರ್ದೇಶಕರ ಸಲಹೆ ಪಡೆಯುತ್ತೇವೆ. ನಮ್ಮ ಭದ್ರತೆಯನ್ನು ಪರಾಮರ್ಶಿಸಲು ಸಂಬಂಧಿತ ಪ್ರಾಧಿಕಾರದೊಂದಿಗೆ ಸತತ ಸಂಪರ್ಕದಲ್ಲಿರುತ್ತೇವೆ’’ ಎಂದು ಐಸಿಸಿ ಮಂಗಳವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಆತಿಥೇಯ ಇಂಗ್ಲೆಂಡ್ ಸಹಿತ ಅಗ್ರ-8 ಏಕದಿನ ಅಂತಾರಾಷ್ಟ್ರೀಯ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿದ್ದು, ಇಂಗ್ಲೆಂಡ್‌ನಲ್ಲಿ 1998ರ ಬಳಿಕ ಮೊದಲ ಬಾರಿ ಟೂರ್ನಿಯನ್ನು ಆಯೋಜಿಸಲಾಗಿದೆ.

ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಿಸಿಸಿಐ

ಮುಂಬೈ, ಮೇ 23: ಮ್ಯಾಂಚೆಸ್ಟರ್‌ನಲ್ಲಿ ಭಯೋತ್ಪಾದಕರ ದಾಳಿ ನಡೆದ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಸುರಕ್ಷತೆಯ ಕುರಿತು ಐಸಿಸಿ ಬಳಿ ಬಿಸಿಸಿಐ ಆತಂಕ ವ್ಯಕ್ತಪಡಿಸಿದೆ ಎಂದು ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ಮಂಗಳವಾರ ತಿಳಿಸಿದ್ದಾರೆ.

‘‘ನಾನು ಇಂದು ಎದ್ದ ತಕ್ಷಣ ಮ್ಯಾಂಚೆಸ್ಟರ್‌ನಲ್ಲಿ ದಾಳಿ ನಡೆದ ವಿಷಯ ತಿಳಿಯಿತು. ಬಿಸಿಸಿಐ ಕಚೇರಿಗೆ ತಲುಪಿದ ತಕ್ಷಣ ಭಾರತೀಯ ತಂಡದ ಪ್ರಯಾಣ, ವಸತಿ ಹಾಗೂ ಆಡುವ ಸ್ಥಳದಲ್ಲಿನ ಸುರಕ್ಷತೆಯ ಕುರಿತು ಆತಂಕ ವ್ಯಕ್ತಪಡಿಸಿ ಐಸಿಸಿಗೆ ಸಂದೇಶ ಕಳುಹಿಸಿದ್ದೆವು. ಐಸಿಸಿ ಎರಡು ಗಂಟೆಯೊಳಗೆ ಪ್ರತಿಕ್ರಿಯಿಸಿದೆ. ನಮ್ಮ ಆತಂಕದ ಬಗ್ಗೆ ಐಸಿಸಿ ತಕ್ಷಣ ಸ್ಪಂದಿಸಿದೆ’’ ಎಂದು ಚೌಧರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News