×
Ad

ಪ್ರೊ ಕಬಡ್ಡಿ ಹರಾಜು: ನಿತಿನ್ ಗೆ ಜಾಕ್‌ಪಾಟ್

Update: 2017-05-23 23:44 IST

 ಹೊಸದಿಲ್ಲಿ, ಮೇ 23: ಐದನೆ ಆವೃತ್ತಿಯ ಕಬಡ್ಡಿ ಲೀಗ್‌ಗೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಭಾರತದ ನಿತಿನ್ ಥೋಮರ್ 93 ಲಕ್ಷ ರೂ.ಗೆ ಜಿಎಂಆರ್ ಮಾಲಕತ್ವದ ಉತ್ತರ ಪ್ರದೇಶ ತಂಡದ ತೆಕ್ಕೆಗೆ ಸೇರುವುದರೊಂದಿಗೆ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಆಟಗಾರನಾಗಿ ದಾಖಲೆ ಬರೆದಿದ್ದಾರೆ.

ಜುಲೈ 28ರಿಂದ 13 ವಾರಗಳ ಕಾಲ ಭಾರತದ 12ನಗರಗಳಲ್ಲಿ ಐದನೆ ಆವೃತ್ತಿ ಪ್ರೊ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಒಟ್ಟು 130 ಪಂದ್ಯಗಳು ನಡೆಯಲಿವೆ. 12ತಂಡಗಳು ಹಣಾಹಣಿ ನಡೆಸಲಿದೆ.

ಹರಾಜು ಲಿಸ್ಟ್‌ನಲ್ಲಿ ಪಾಕಿಸ್ತಾನದ 16 ಆಟಗಾರರು ಇದ್ದರೂ ಅವರನ್ನು ಯಾವುೇ ತಂಡ ಖರೀದಿಗೆ ಆಸಕ್ತಿ ವಹಿಸಲಿಲ್ಲ.

ಕಳೆದ ವರ್ಷ ಅಹ್ಮದಾಬಾದ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡದ ಆಟಗಾರ ನಿತಿನ್ ಇದೀಗ ಹರಾಜಿನಲ್ಲಿ ಎಲ್ಲರನ್ನೂ ಮೀರಿಸಿದ್ದಾರೆ.

ನಿತಿನ್ ಮೂಲಬೆಲೆ 20 ಲಕ್ಷ ರೂ. ಆಗಿತ್ತು.

ಮೊದಲ ದಿನ 27.27 ಕೋಟಿ. ರೂ.ಗಳಿಗೆ 60 ಆಟಗಾರರನ್ನು ಆಯ್ಕೆ ಮಾಡಲಾಗಿತ್ತು.

 ನಿತಿನ್ ಅವರನ್ನು ಹೊರತುಪಡಿಸಿದರೆ ಸ್ಥಳೀಯ ಆಟಗಾರರಾದ ರೋಹಿತ್ ಕುಮಾರ್ 81 ಲಕ್ಷ ರೂ. (ಬೆಂಗಳೂರು ಬುಲ್ಸ್,) ಮನ್‌ಜೀತ್ ಚಿಲ್ಲಾರ್ ಅವರು ಜೈಪುರ ಪಿಂಕ್ ಪ್ಯಾಂಥರ್ಸ್ ಗೆ 75.5 ಲಕ್ಷ ರೂ., ಸುರ್ಜಿತ್ ಸಿಂಗ್ ಅವರು ಬೆಂಗಾಲ್ ವಾರಿಯರ್ಸ್‌ ಗೆ 73 ಲಕ್ಷ ರೂ. ಮತ್ತು ಸೆಲ್ವಾಮಣಿ ಕೆ ಅವರು ಜೈಪುರ ಪಿಂಕ್ ಪ್ಯಾಂಥರ್ಸ್‌ ಗೆ 73 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ.

12 ಫ್ರಾಂಚೈಸಿ ತಂಡಗಳು ಆಟಗಾರರನ್ನು ಖರೀದಿಸುವಲ್ಲಿ ಪೈಪೋಟಿ ನಡೆಸಿದ್ದರು.ಪ್ರತಿಯೊಂದು ತಂಡಕ್ಕೂ ದೇಶದ ಅಥವಾ ವಿದೇಶ ತಂಡದ ಓರ್ವ ನುರಿತ ಆಟಗಾರನ ಖರೀದಿಗೆ ಅವಕಾಶ ನೀಡಲಾಗಿತ್ತು.

ಕಬಡ್ಡಿ ತಾರೆಯರಾದ ರಾಹುಲ್ ಚೌಧರಿ (ತೆಲುಗು ಟೈಟಾನ್ಸ್), ಅನೂಪ್ ಕುಮಾರ್(ಯು.ಮುಂಬಾ), ಜಾಂಗ್ ಕುನ್ ಲೀ(ಬೆಂಗಾಲ್ ವಾರಿಯರ್ಸ್‌), ಆಶೀಷ್ ಕುಮಾರ್(ಬೆಂಗಳೂರು ಬುಲ್ಸ್), ಮೆರಾಜ್ ಶೇಖ್(ಡಬಾಂಗ್ ಡಿಲ್ಲಿ ಕೆ.ಸಿ), ಪ್ರದೀಪ್ ನರ್ವಾಲ್(ಪಾಟ್ನಾ ಪಿರೇಟ್ಸ್) ಮತ್ತು ದೀಪಕ್ ಹೂಡಾ ಅವರು ಪುಣೇರಿ ಪಾಲ್ಟಾನ್ ತಂಡದಲ್ಲಿ ಸ್ಥಾನ ಪಡೆದರು.

ಹೊಸ ತಂಡಗಳಿಗೆ ಆದ್ಯತೆ ನೆಲೆಯಲ್ಲಿ ಓರ್ವ ಆಟಗಾರನಆಯ್ಕೆಗೆ ಅವಕಾಶ ನೀಡಲಾಗಿತ್ತು. ಅದರಂತೆ 2016ರ ಕಬಡ್ಡಿ ವರ್ಲ್ಡ್ ಕಪ್‌ನಲ್ಲಿ ಪ್ರಶಸ್ತಿ ಜಯಿಸಿದ ತಂಡದ ಆಟಗಾರ ಸುರೇಂದ್ರ ನಾಡ ಅವರು ಹರ್ಯಾಣ ತಂಡಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಗುಜರಾತ್ ತಂಡ ಇರಾನ್‌ನ ಫಝೆಲ್ ಅಟ್ರಾಚಾಲಿ ಅವರನ್ನು ತನ್ನ ತೆಕ್ಕೆಗೆ ಸೇರ್ಪಡೆಗೊಳಿಸಿತು. ಆದರೆ ಉತ್ತರ ಪ್ರದೇಶ ತಂಡ ಆದ್ಯತೆ ಆಟಗಾರನನ್ನು ಸೇರ್ಪಡೆಗೊಳಿಸಲಿಲ್ಲ.

  ಇರಾನ್ ತಂಡದ ಆಟಗಾರರು ಹೆಚ್ಚಿನ ಬೇಡಿಕೆ ಇರುವ ಆಟಗಾರರಾಗಿ ಗಮನ ಸೆಳೆದಿದ್ದಾರೆ. ಡಿಫೆಂಡರ್ ಅಬೊಝಾರ್ ಮೊಹಾಜೆರ್‌ಮಿಘಾನಿ 50 ಲಕ್ಷ ರೂ.ಗೆ ಗುಜರಾತ್ ತಂಡಕ್ಕೆ ಸೇರ್ಪಡೆಗೊಂಡರು. ಅಬೊಝಾರ್ ಅವರ ರಾಷ್ಟ್ರೀಯ ತಂಡದ ಸಹ ಆಟಗಾರ ಅಬೊಲ್‌ಫಝೆಲ್ ಮಘಸೊಡ್ಲೊ , ಫರ್ಹಾದ್ ರಹೀಮಿ, ಹಾದಿ ಒಸ್ಟ್ರೋಕ್ ಮತ್ತು ಮುಹಮ್ಮದ್ ಮಘಸೌಡ್ಲೊ ವಿವಿಧ ತಂಡಗಳಿಗೆ ಸೇರ್ಪಡೆಗೊಂಡರು.

 ಡಿಫೆಂಡರ್ ಅಬೊಲ್‌ಫಝೇಲ್ ವಿದೇಶಿ ಆಟಗಾರರ ಎರಡನೆ ದುಬಾರಿ ಆಟಗಾರ. ಅವರು ದಬಾಂಗ್ ದಿಲ್ಲಿ ತಂಡಕ್ಕೆ 31.8 ಲಕ್ಷ ರೂ.ಗಳಿಗೆ,ಡಿಫೆಂಡರ್ ಫರ್ಹಾದ್ ಅವರು 29 ಲಕ್ಷ ರೂ.ಗಳಿಗೆ ತೆಲುಗು ಟೈಟಾನ್ಸ್‌ಗೆ, ಆಲ್‌ರೌಂಡರ್ ಹಾದಿ ಅವರು 18.6 ಲಕ್ಷ ರೂ.ಗಳಿಗೆ ಯು ಮುಂಬಾ ಸೇರಿದರು.

  ಪಾಟ್ನಾ ಪೈರೇಟ್ಸ್ ನಾಯಕ ಧರ್ಮರಾಜ್ ಚೆರ್ಲಾಥಾನ್ 46 ಲಕ್ಷ ರೂ.ಗೆ ಪುಣೇರಿ ಪಲ್ಟನ್ ಮತ್ತು ಎರ್ನಾಕ್ 33.50 ಲಕ್ಷ ರೂ.ಗಳಿಗೆ ಪುಣೇರಿ ತಂಡ ಸೇರ್ಪಡೆಗೊಂಡರು. ಇದೇ ವೇಳೆ ಪಾಟ್ನಾ ತಂಡ 42.5 ಲಕ್ಷ ರೂ.ಗಳಿಗೆ ನೀಲೇಶ್ ಶಿಂಧೆ ಮತ್ತು ವಿಶಾಲ್ ಮಾನೆ ಅವರನ್ನು 36.5 ಲಕ್ಷ ರೂ.ಗಳಿಗೆ ಖರೀದಿಸಿತು.

ನೀಲೇಶ್ ಶಿಂಧೆ ಅವರು ದಬಾಂಗ್ ದಿಲ್ಲಿಗೆ 35.5 ಲಕ್ಷ ರೂ., ಮತ್ತು ಜೋಗಿಂದರ್ ಸಿಂಗ್ ನರ್ವಾಲ್ ಅವರು ಯು ಮುಂಬಾ ತಂಡಕ್ಕೆ 25 ಲಕ್ಷ ರೂ.ಗೆ ಸೇರ್ಪಡೆಗೊಂಡರು.

 ರೋಹಿತ್ ರಾಣಾ 27.5 ಲಕ್ಷ ರೂ.ಗೆ ತೆಲುಗು ಟೈಟಾನ್ಸ್‌ಗೆ ಸೇರಿದರು.

ಸಂದೀಪ್ ಧುಲ್ ಮಾತ್ರ ಹರಾಜಾಗದೆ ಉಳಿದ ಭಾರತದ ಏಕೈಕ ಆಟಗಾರ.

 ಥಾಯ್ಲೆಂಡ್ ನ ರೈಡರ್ ಖೊಮ್ಸನ್ ಥಾಂಗ್‌ಕಾಮ್ 20.40 ಲಕ್ಷ ರೂ.ಗೆ ಹರ್ಯಾಣ ತಂಡ ಸೇರಿದರು. ಬಾಂಗ್ಲಾದೇಶದ ಡಿಫೆಂಡರ್ ಝಿಹಾರ್ರುಹ್ಮಾನ್ ಅವರು 16.6 ಲಕ್ಷ ರೂ.ಗೆ ಪುಣೇರಿ ಪಲ್ಟಾನ್, ಸುಲೈಮಾನ್ ಕಬೀರ್ 12.6 ಲಕ್ಷ ರೂ.ಗೆ ಉತ್ತರ ಪ್ರದೇಶ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ದಕ್ಷಿಣ ಕೊರಿಯಾದ ಆಲ್‌ರೌಂಡರ್ ಡೊಂಗ್ಯು ಕಿಮ್ ಮತ್ತು ಜಪಾನ್‌ನ ಆಲ್‌ರೌಂಡರ್ ಟಕಮಿಸ್ಟು ಕೊನೊ ತಲಾ 8 ಲಕ್ಷ ರೂ.ಗೆ ಪುಣೇರಿ ಪಲ್ಟಾನ್ ಸೇರಿದರು.

  ದಕ್ಷಿಣ ಕೊರಿಯಾದ ಆಲ್‌ರೌಂಡರ್ ಯಾಂಗ್‌ಜೊ ಓಕ್ ಕೊರಿಯಾ ಅವರು 8.10 ಲಕ್ಷ ರೂ.ಗಳಿಗೆ ಯು.ಮುಂಬಾ ತಂಡದಲ್ಲಿ ಅವಕಾಶ ಪಡೆದರು.

ಗರಿಷ್ಠ ಬೆಲೆಗೆ ಮಾರಾಟವಾಗಿರುವ ಆಟಗಾರರು

                          ಆಟಗಾರರ ಹೆಸರುತಂಡರೂ.

            1.ನಿತಿನ್ ಥೋಮರ್‌ಉತ್ತರಪ್ರದೇಶ93.0 ಲಕ್ಷ ರೂ.

                   2.ರೋಹಿತ್ ಕುಮಾರ್‌ಬೆಂಗಳೂರು 81.0 ಲಕ್ಷ ರೂ.

                   3.ಮನ್‌ಜೀತ್ ಚಿಲ್ಲಾರ್‌ಜೈಪುರ75.5 ಲಕ್ಷ ರೂ.

                          4.ಸುರ್ಜಿತ್ ಸಿಂಗ್‌ಬೆಂಗಾಲ್73.0 ಲಕ್ಷ ರೂ.

            5.ರಾಜೇಶ್ ನರ್ವಾಲ್ ಉತ್ತರಪ್ರದೇಶ69.0 ಲಕ್ಷ ರೂ.

                   6.ಸಂದೀಪ್ ನರ್ವಲ್‌ಪುಣೆ66.0 ಲಕ್ಷ ರೂ.

                   7.ಅಮಿತ್ ಹೂಡಾತಮಿಳುನಾಡು63.0 ಲಕ್ಷ ರೂ.

                   8.ಜೀವ ಕುಮಾರ್‌ಉತ್ತರಪ್ರದೇಶ52.0 ಲಕ್ಷ ರೂ.

                   9.ಕುಲ್‌ದೀಪ್ ಸಿಂಗ್‌ಮುಂಬೈ51.5 ಲಕ್ಷ ರೂ.

                           10.ಜಸ್ವೀರ್ ಸಿಂಗ್‌ಜೈಪುರ51.0 ಲಕ್ಷ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News