ಐಸಿಸಿ ಚಾಂಪಿಯನ್ಸ್ ಟ್ರೋಫಿ: ಅಕ್ಮಲ್ ಜಾಗಕ್ಕೆ ಸೊಹೈಲ್ ಆಯ್ಕೆ

Update: 2017-05-23 18:16 GMT

ಕರಾಚಿ,ಮೇ 23: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪೂರ್ವ ಶಿಬಿರದಲ್ಲಿ ಎರಡು ಬಾರಿ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದ ಉಮರ್ ಅಕ್ಮಲ್ ಬದಲಿಗೆ ಬ್ಯಾಟ್ಸ್‌ಮನ್ ಹಾರಿಸ್ ಸೊಹೈಲ್ ಆಯ್ಕೆಯಾಗಿದ್ದಾರೆ.

 ಪಾಕಿಸ್ತಾನದ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಇಂಝಮಮ್‌ವುಲ್ ಹಕ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಉಮರ್ ಅಮಿನ್, ಸೊಹೈಲ್ ಹಾಗೂ ಆಸಿಫ್ ಝಾಕಿರ್ ಫಿಟ್‌ನೆಸ್ ಪರೀಕ್ಷೆಗಾಗಿ ಆಹ್ವಾನ ನೀಡಿದ್ದರು. ತರಬೇತಿದಾರ ನೀಡಿದ ವರದಿಯನ್ವಯ ಮೂವರ ಪರೀಕ್ಷೆ ನಡೆಸಲಾಗಿತ್ತು. ಪಾಕಿಸ್ತಾನ ಟೀಮ್ ಮ್ಯಾನೇಜ್‌ಮೆಂಟ್‌ನ ಕೋರಿಕೆಯ ಮೇರೆಗೆ ಉಮರ್ ಅಕ್ಮಲ್ ಬದಲಿಗೆ ಸೊಹೈಲ್‌ರನ್ನು ಜೂ.1 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ ಎಂದು ಪಿಸಿಬಿ ತಿಳಿಸಿದೆ.

 ಪಾಕಿಸ್ತಾನ ತಂಡ ಜೂ.4 ರಂದು ಸಾಂಪ್ರದಾಯಿಕ ಎದುರಾಳಿ ಭಾರತವನ್ನು ಎದುರಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ.

ಎಡಗೈ ಬ್ಯಾಟ್ಸ್‌ಮನ್ ಸೊಹೈಲ್ 2015ರ ಬಳಿಕ ಪಾಕ್ ತಂಡದ ಪರ ಆಡಿಲ್ಲ. ಮಂಡಿನೋವಿಗೆ ಒಳಗಾಗಿ ಆಸ್ಟ್ರೇಲಿಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೊಹೈಲ್ ಇತ್ತೀಚೆಗಷ್ಟೇ ದೇಶೀಯ ಕ್ರಿಕೆಟ್‌ಗೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News