ಮೆಸ್ಸಿ ವಿರುದ್ಧ ಜೈಲು ಶಿಕ್ಷೆ ಖಾಯಂಗೊಳಿಸಿದ ಸ್ಪೇನ್ ಸುಪ್ರೀಂಕೋರ್ಟ್
ಮ್ಯಾಡ್ರಿಡ್, ಮೇ 24: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಲಿಯೊನೆಲ್ ಮೆಸ್ಸಿಗೆ ವಿಧಿಸಲಾಗಿರುವ 21 ತಿಂಗಳ ಜೈಲು ಶಿಕ್ಷೆ ಹಾಗೂ 2.09 ಮಿಲಿಯನ್-ಯುರೊ ದಂಡವನ್ನು ಸ್ಪೇನ್‌ನ ಸುಪ್ರೀಂಕೋರ್ಟ್ ಖಾಯಂಗೊಳಿಸಿದೆ. ತನ್ನ ವಿರುದ್ಧ ವಿಧಿಸಲಾಗಿರುವ ಶಿಕ್ಷೆ ಹಾಗೂ ದಂಡವನ್ನು ಪ್ರಶ್ನಿಸಿ ಮೆಸ್ಸಿ ತಿಂಗಳ ಹಿಂದೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜೆಂಟೀನದ ಆಟಗಾರ ಮೆಸ್ಸಿ ಹಾಗೂ ಅವರ ತಂದೆ ಜಾರ್ಜ್ ಮೆಸ್ಸಿ ವಿರುದ್ಧ 2016ರ ಜುಲೈನಲ್ಲಿ ತೆರಿಗೆ ವಂಚಿಸಿರುವುದು ಸಾಬೀತಾಗಿತ್ತು. ಮೆಸ್ಸಿ ಹಾಗೂ ಅವರ ತಂದೆಯ ವಿರುದ್ಧ 4.16 ಮಿಲಿಯನ್ ಯುರೋಸ್ ತೆರಿಗೆ ವಂಚಿಸಿರುವ ಆರೋಪ ವಿದೆ. 2007 ಹಾಗೂ 09ರ ನಡುವೆ ಮೆಸ್ಸಿ ಇಮೇಜ್ ರೈಟ್ಸ್‌ನ ಮೂಲಕ ಪಡೆದಿರುವ ಆದಾಯಕ್ಕೆ ತೆರಿಗೆಯನ್ನು ತಪ್ಪಿಸುವ ಉದ್ದೇಶದಿಂದ ಬೆಲಿಝ್, ಬ್ರಿಟನ್, ಸ್ವಿಟ್ಝರ್‌ರ್ಲೆಂಡ್ ಹಾಗೂ ಉರುಗ್ವೆ ಕಂಪೆನಿಗಳನ್ನು ಬಳಸಿಕೊಂಡ ಆರೋಪವನ್ನು ಎದುರಿಸುತ್ತಿದ್ದಾರೆ.
ಮೆಸ್ಸಿ ಜುಲೈ 2016ರಲ್ಲಿ ತನ್ನ ವಿರುದ್ಧ ವಿಧಿಸಲಾಗಿರುವ ಜೈಲು ಶಿಕ್ಷೆ ಹಾಗೂ ದಂಡದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಬುಧವಾರ ವಿಚಾರಣೆ ನಡೆಸಿದ ಸ್ಪೇನ್‌ನ ಸುಪ್ರೀಂಕೋರ್ಟ್ ಐದು ಬಾರಿಯ ವರ್ಷದ ಆಟಗಾರ ಪ್ರಶಸ್ತಿ ವಿಜೇತ ಮೆಸ್ಸಿಯ ವಿರುದ್ಧ ಶಿಕ್ಷೆಯನ್ನು ಖಾಯಂಗೊಳಿಸಿದೆ.
ಮೆಸ್ಸಿ ತೆರಿಗೆ ಇಲಾಖೆಗೆ ವಂಚಿಸಿದ್ದ ಹಣವನ್ನು ಪಾವತಿಸಿರುವ ಹಿನ್ನೆಲೆಯಲ್ಲಿ ಮೆಸ್ಸಿಯ ತಂದೆಗೆ ಜೈಲು ಶಿಕ್ಷೆಯ ಅವಧಿಯನ್ನು 15 ತಿಂಗಳಿಗೆ ಕಡಿತಗೊಳಿಸಿದೆ. ಮೆಸ್ಸಿ ಹಾಗೂ ಅವರ ತಂದೆ ವಿರುದ್ಧ ಅಧಿಕೃತ ತನಿಖೆ ಅಂತ್ಯಗೊಂಡ ಬಳಿಕ 2013ರ ಆಗಸ್ಟ್‌ನಲ್ಲಿ ಮೆಸ್ಸಿ ಹಾಗೂ ಅವರ ತಂದೆ ತಾವು ವಂಚಿಸಿದ್ದ ತೆರಿಗೆ ಹಣವನ್ನು ಪಾವತಿಸಿದ್ದರು.
ಮೆಸ್ಸಿ ಹಾಗೂ ಅವರ ತಂದೆಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇವರಿಬ್ಬರ ವಿರುದ್ಧದ ಜೈಲು ಶಿಕ್ಷೆ ಅಮಾನತುಗೊಳ್ಳುವ ಸಾಧ್ಯತೆಯಿದೆ. ಸ್ಪೇನ್‌ನಲ್ಲಿ ಮೊದಲ ಬಾರಿ ಅಪರಾಧ ಎಸಗುವ, ಹಿಂಸಾರಹಿತ ಅಪರಾಧಗಳಿಗೆ ಎರಡಕ್ಕಿಂತ ಕಡಿಮೆ ಜೈಲು ಶಿಕ್ಷೆ ವಿಧಿಸುವುದು ಸರ್ವೇಸಾಮಾನ್ಯವಾಗಿದೆ.