×
Ad

ಲಂಡನ್ ಗೆ ಹೊರಟ ಚಾಂಪಿಯನ್ ಟೀಮ್ ಇಂಡಿಯಾ

Update: 2017-05-24 23:32 IST

ಹೊಸದಿಲ್ಲಿ, ಮೇ 24:ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್ ಮುಂದಿನ ತಿಂಗಳು ಪ್ರಾರಂಭಗೊಳ್ಳಲಿದ್ದು, ಹಿಂದಿನ ಎಲ್ಲ ಆವೃತ್ತಿಗಳಲ್ಲಿ ಪಾಲ್ಗೊಂಡಿರುವ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಯಶಸ್ವಿ ತಂಡವಾಗಿದೆ.

ಭಾರತ ಜೂನ್ 4ರಂದು ಪಾಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಭಿಯಾನ ಆರಂಭಿಸಲಿದೆ.

ವಿರಾಟ್ ಕೊಹ್ಲಿ ನಾಯಕರಾಗಿ ಐಸಿಸಿಯ ಪ್ರಮುಖ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಭಾರತಕ್ಕೆ ಒಂದು ರೀತಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಶ್ರ ಫಲ ಸಿಕ್ಕಿದೆ. ಒಂದು ಬಾರಿ ಚಾಂಪಿಯನ್ , ಒಂದು ಬಾರಿ ಶ್ರೀಲಂಕಾ ತಂಡದೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿತ್ತು. ಫೈನಲ್‌ನಲ್ಲಿ ಒಂದು ಬಾರಿ ಮುಗ್ಗರಿಸಿತ್ತು.

ಸೌರವ್ ಗಂಗುಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್ ಮತ್ತು ಶಿಖರ್ ಧವನ್ ಚಾಂಪಿಯನ್ಸ್ ಟ್ರೋಫಿಯ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಝಹೀರ್ ಖಾನ್, ಹರ್ಭಜನ್ ಸಿಂಗ್ ಮತ್ತು ಇಶಾಂತ್ ಶರ್ಮ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ವಿಕೆಟ್ ಪಡೆದವರು. ಮಹೇಂದ್ರ ಸಿಂಗ್ ಧೋನಿ ಯಶಸ್ವಿ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

   ಭಾರತ ಈ ಬಾರಿ ಹಾಲಿ ಚಾಂಪಿಯನ್ ಆಗಿ ಟೂರ್ನಮೆಂಟ್ ಪ್ರವೇಶಿಸುತ್ತಿದೆ. ಹ್ಯಾಟ್ರಿಕ್ ಚಾಂಪಿಯನ್ ಎನಿಸಿಕೊಳ್ಳುವ ಕನಸಿನೊಂದಿಗೆ ಭಾರತ ಕಣಕ್ಕಿಳಿಯಲಿದೆ.ಭಾರತಕ್ಕೆ ಮೂರು ಬಾರಿ ಪ್ರಶಸ್ತಿ ಜಯಿಸಿ ಇತಿಹಾಸ ನಿರ್ಮಿಸುವ ತನಕ. ನಾಯಕ ಕೊಹ್ಲಿಗೆ ಚಾಂಪಿಯನ್ ಪಟ್ಟವನ್ನು ಉಳಿಸುವ ನಿಟ್ಟಿನಲ್ಲಿ ಕಠಿಣ ಸವಾಲು ಎದುರಾಗಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಪಯಣದ ಹಾದಿ ಇಂತಿವೆ.

1998ರಲ್ಲಿ ವಿಲ್ಸ್ ಇಂಟರ್‌ನ್ಯಾಶನಲ್ ಕಪ್(ಬಾಂಗ್ಲಾದೇಶ)-ಸೆಮಿಫೈನಲ್:

 ಬಾಂಗ್ಲಾದಲ್ಲಿ 1998ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಮುಹಮ್ಮದ್ ಅಝರುದ್ದೀನ್ ನಾಯಕತ್ವದ ಟೀಮ್ ಇಂಡಿಯಾ ಬಲಿಷ್ಠವಾಗಿದ್ದರೂ ಸೆಮಿಫೈನಲ್‌ನಲ್ಲಿ ನಿರ್ಗಮಿಸಿತ್ತು. ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್ , ರಾಹುಲ್ ದ್ರಾವಿಡ್, ಅಜಯ್ ಜಡೇಜ, ಮತ್ತು ರಾಬಿನ್ ಸಿಂಗ್ ಅವರಂತಹ ದಾಂಡಿಗರಿದ್ದರು. ಜಾವಗಲ್ ಶ್ರೀನಾಥ್ ವೇಗದ ಬೌಲಿಂಗ್ ವಿಭಾಗವನ್ನು , ಅನಿಲ್ ಕುಂಬ್ಳೆ ಸ್ಪಿನ್ ವಿಭಾಗವನ್ನು ಮುನ್ನಡೆಸಿದ್ದರು. ಆದರೆ ಭಾರತ ಸೆಮಿಫೈನಲ್‌ನಲ್ಲಿ ಬ್ರಿಯಾನ್ ಲಾರಾ ನಾಯಕತ್ವದ ವೆಸ್ಟ್‌ಇಂಡೀಸ್ ವಿರುದ್ಧ ಸೋಲು ಅನುಭವಿಸಿತ್ತು.

2000 ಐಸಿಸಿ ಚಾಂಪಿಯನ್ಸ್ ಟ್ರೋಫಿ (ಕೀನ್ಯ)-ರನ್ನರ್ಸ್‌ ಅಪ್: ಕೀನ್ಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಸೌರವ್ ಗಂಗುಲಿ ಆಕರ್ಷಕ 117 ರನ್ ದಾಖಲಿಸಿ ನ್ಯೂಝಿಲೆಂಡ್‌ಗೆ ದೊಡ್ಡ ಸವಾಲು ವಿಧಿಸಿದ್ದರು. ಆದರೆ ನ್ಯೂಝಿಲೆಂಡ್‌ನ ಕ್ರಿಸ್ ಕ್ರೈನ್ಸ್ ಔಟಾಗದೆ 102 ರನ್ ದಾಖಲಿಸಿ ನ್ಯೂಝಿಲೆಂಡ್‌ಗೆ ನಾಲ್ಕು ವಿಕೆಟ್‌ಗಳ ಜಯ ಗಳಿಸಿ ಟ್ರೋಫಿ ಎತ್ತಿಕೊಂಡಿತ್ತು. ಯುವರಾಜ್ ಸಿಂಗ್ ಮತ್ತು ಝಹೀರ್ ಖಾನ್ ಈ ಟೂರ್ನಮೆಂಟ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದರು.

 2002 ಐಸಿಸಿ ಚಾಂಪಿಯನ್ಸ್ ಟ್ರೋಫಿ (ಶ್ರೀಲಂಕಾ) -ಜಂಟಿ ಚಾಂಪಿಯನ್: ಮೂರನೆ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಶ್ರೀಲಂಕಾದಲ್ಲಿ ನಡೆದಿತ್ತು. ಫೈನಲ್‌ನಲ್ಲಿ ಆಟಕ್ಕೆ ಮಳೆ ಅಡ್ಡಿಪಡಿಸಿತ್ತು. ಸನತ್ ಜಯಸೂರ್ಯ ಮತ್ತು ಕುಮಾರ ಸಂಗಕ್ಕರ ದಾಖಲಿಸಿದ ಅರ್ಧಶತಕಗಳ ಸಹಾಯದಿಂದ ಶ್ರೀಲಂಕಾ 5 ವಿಕೆಟ್‌ಗಳ ನಷ್ಟದಲ್ಲಿ 244 ರನ್ ಗಳಿಸಿತ್ತು. ಸೌರವ್ ಗಂಗುಲಿ ನಾಯಕತ್ವದ ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಿಸಿ ವಿಕೆಟ್ ನಷ್ಟವಿಲ್ಲದೆ 2 ಓವರ್‌ಗಳಲ್ಲಿ 14 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡಿತು. ಮಳೆಯಿಂದಾಗಿ ಆ ದಿನದ ಆಟ ರದ್ಧಾಗಿತ್ತು. ಮೀಸಲು ದಿನವಾಗಿದ್ದ ಎರಡನೆ ದಿನ ಟಾಸ್ ಜಯಿಸಿದ ಶ್ರೀಲಂಕಾ ತಂಡ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 222 ರನ್ ಗಳಿಸಿತ್ತು. 223 ರನ್‌ಗಳ ಸವಾಲನ್ನು ಪಡೆದ ಭಾರತ ಬ್ಯಾಟಿಂಗ್ ಆರಂಭಿಸಿದಾಗ ಭಾರೀ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತು. ಬಳಿಕ ಆಟ ಮುಂದುವರಿಯಲಿಲ್ಲ. ಈ ಕಾರಣದಿಂದಾಗಿ ಭಾರತ ಮತ್ತು ಶ್ರೀಲಂಕಾ ತಂಡವನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಲಾಗಿತ್ತು.

2004ಐಸಿಸಿ ಚಾಂಪಿಯನ್ಸ್ ಟ್ರೋಫಿ (ಇಂಗ್ಲೆಂಡ್) -ಗ್ರೂಪ್ ಹಂತ: ಸೌರವ್ ಗಂಗುಲಿ ನಾಯಕತ್ವದ ಟೀಮ್ ಇಂಡಿಯಾ ಕೀನ್ಯ ವಿರುದ್ಧ 98 ರನ್‌ಗಳ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತ್ತು. ಪಾಕಿಸ್ತಾನ ವಿರುದ್ಧ 3 ವಿಕೆಟ್‌ಗಳ ಸೋಲು ಅನುಭವಿಸಿದ್ದ ಭಾರತಕ್ಕೆ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ.

2006ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತದಲ್ಲಿ ನಡೆದ ಐದನೆ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಜಯ ಗಳಿಸಿತ್ತು. ಆದರೆ ಬಳಿಕ ವೆಸ್ಟ್‌ಇಂಡೀಸ್ ಮತ್ತು ಆಸ್ಟ್ರೇಲಿಯ ವಿರುದ್ಧ ಸೋಲು ಅನುಭವಿಸಿದ ಭಾರತ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು.

2009ಐಸಿಸಿ ಚಾಂಪಿಯನ್ಸ್ ಟ್ರೋಫಿ (ದಕ್ಷಿಣ ಆಫ್ರಿಕ) ಗ್ರೂಪ್ ಹಂತ: ದಕ್ಷಿಣ ಆಫ್ರಿಕದಲ್ಲಿ ನಡೆದ ಆರನೆ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಮೆಂಟ್‌ನಲ್ಲಿ ಭಾರತ ಮತ್ತೊಮ್ಮೆ ಸೆಮಿಫೈನಲ್‌ಗೇರುವಲ್ಲಿ ಎಡವಿತ್ತು. ರಾಹುಲ್ ದ್ರಾವಿಡ್ ನಾಯಕತ್ವದ ಟೀಮ್ ಇಂಡಿಯಾವು ಪಾಕಿಸ್ತಾನ ವಿರುದ್ಧ 54 ರನ್‌ಗಳ ಸೋಲು ಅನುಭವಿಸಿತ್ತು.ಆಸ್ಟ್ರೇಲಿಯ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.ಕೊನೆಯ ಪಂದ್ಯದಲ್ಲಿ ವೆಸ್ಟ್‌ಇಂಡಿಸ್ ವಿರುದ್ಧ ಗೆಲುವು ದಾಖಲಿಸಿ ಮೂರು ಅಂಗಳನ್ನು ಪಡೆದರೂ ಸೆಮಿಫೈನಲ್ ತಲುಪಲಿಲ್ಲ.

   2013 ಐಸಿಸಿ ಚಾಂಪಿಯನ್ಸ್ ಟ್ರೋಫಿ (ಇಂಗ್ಲೆಂಡ್) -ಚಾಂಪಿಯನ್: ಹಿಂದಿನ ಮೂರು ಆವೃತ್ತಿಗಳಲ್ಲೂ ಗ್ರೂಪ್ ಹಂತದಲ್ಲೇ ನಿರ್ಗಮಿಸಿದ್ದ ಭಾರತ ಏಳನೆ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕ, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧ ಗೆಲುವಿನೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್ ತಲುಪಿತ್ತು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತ್ತು. ಫೈನಲ್‌ನಲ್ಲಿ ಮಳೆ ಅಡ್ಡಿಪಡಿಸಿತ್ತು. 50 ಓವರ್‌ಗಳ ಪಂದ್ಯ 20 ಓವರ್‌ಗಳಿಗೆ ಕಡಿತಗೊಂಡಿತ್ತು. ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿತ್ತು. 130 ರನ್‌ಗಳ ಗೆಲುವಿನ ಸವಾಲನ್ನು ಪಡೆದ ಇಂಗ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 124 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ರವೀಂದ್ರ ಜಡೇಜರ ಆಲ್‌ರೌಂಡ್ ಆಟದ ನೆರವಿನಲ್ಲಿ ಭಾರತ 5 ರನ್‌ಗಳ ರೋಚಕ ಗೆಲುವಿನೊಂದಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿತು. ಇದರೊಂದಿಗೆ ಮಹೇಂದ್ರ ಸಿಂಗ್ ಧೋನಿ ಅವರು ಚಾಂಪಿಯನ್ಸ್ ಟ್ರೋಫಿ, 2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಮತ್ತು 2011ರಲ್ಲಿ 50 ಓವರ್‌ಗಳ ವಿಶ್ವಕಪ್‌ನಲ್ಲಿ ಟ್ರೋಫಿ ಜಯಿಸುವ ಮೂಲಕ ಐಸಿಸಿಯ ಮೂರು ಪ್ರಮುಖ ಟ್ರೋಫಿಗಳನ್ನು ಎತ್ತಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು.

,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News