×
Ad

ಫ್ರೆಂಚ್ ಓಪನ್: ಫೆಡರರ್, ಸೆರೆನಾ, ಶರಪೋವಾ ಗೈರು

Update: 2017-05-24 23:38 IST

 ಪ್ಯಾರಿಸ್,ಮೇ 24: ವರ್ಷದ ಎರಡನೆ ಗ್ರಾನ್‌ಸ್ಲಾಮ್ ಟೂರ್ನಿ ಫ್ರೆಂಚ್ ಓಪನ್ ನಲ್ಲಿ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಹಾಗೂ ಮರಿಯಾ ಶರಪೋವಾ ಗೈರು ಹಾಜರಾಗಲಿದ್ದು, ಈ ಮೂವರ ಅನುಪಸ್ಥಿತಿಯು ಟೂರ್ನಿಯ ಮೇಲೆ ಪರಿಣಾಮಬೀರದು ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ಮೂವರು ಸ್ಟಾರ್ ಆಟಗಾರರ ಅನುಪಸ್ಥಿತಿಯು ಟೂರ್ನಿಯನ್ನು ದುರ್ಬಲಗೊಳಿಸಲಾರದು. ಫ್ರೆಂಚ್ ಓಪನ್ ಒಂದು ಸಂಸ್ಥೆಯಿದ್ದಂತೆ ಹಾಗೂ ಆಟಗಾರರಿಗೆ ಇದೊಂದು ಪವಿತ್ರ ತಾಣವಾಗಿದೆ. ಗ್ರಾನ್‌ಸ್ಲಾಮ್ ಟೂರ್ನಿಗಳಿಗೆ ತನ್ನದೇ ಆದ ಇತಿಹಾಸವಿದ್ದು, ಇದೊಂದು ವಿಶೇಷವಾಗಿದೆ’’ ಎಂದು ಫ್ರೆಂಚ್ ಟೆನಿಸ್ ಇತಿಹಾಸಕಾರ ಜಿಯನ್-ಕ್ರಿಸ್ಟೋಫ್ ಹೇಳಿದ್ದಾರೆ.

 ಇತ್ತೀಚೆಗೆ ಮಾಂಟೆ ಕಾರ್ಲೊ ಹಾಗೂ ಬಾರ್ಸಿಲೋನ ಓಪನ್‌ನಲ್ಲಿ ಪ್ರಶಸ್ತಿಗಳನ್ನು ಜಯಿಸಿರುವ ಸ್ಪೇನ್‌ನ ರಫೆಲ್ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಆಟಗಾರನಾಗಿದ್ದಾರೆ. 2005, 2006, 2007, 2008, 2010, 2011, 2012, 2013 ಹಾಗೂ 2014ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿರುವ ನಡಾಲ್ 2015ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಸೋತಿದ್ದರು. ಜೊಕೊವಿಕ್‌ಗೆ ಶರಣಾಗಿದ್ದ ನಡಾಲ್ ಅವರ ಸತತ 39 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿತ್ತು. ಕಳೆದ ವರ್ಷದ ಫ್ರೆಂಚ್ ಓಪನ್‌ನಲ್ಲಿ ಮಣಿಗಂಟು ಗಾಯಕ್ಕೀಡಾಗಿದ್ದ ನಡಾಲ್ ಎರಡು ಸುತ್ತಿನ ಪಂದ್ಯದ ಬಳಿಕ ಟೂರ್ನಿಯಿಂದ ಹಿಂದೆಸರಿದಿದ್ದರು.

2016ರಲ್ಲಿ ಫ್ರೆಂಚ್ ಓಪನ್ ಜಯಿಸಿದ್ದ ಜೊಕೊವಿಕ್ ವೃತ್ತಿಜೀವನದಲ್ಲಿ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು.

  ಮಹಿಳೆಯರ ಸಿಂಗಲ್ಸ್‌ನಲ್ಲಿ ಈ ವರ್ಷ ಸೆರೆನಾ ವಿಲಿಯಮ್ಸ್(2013 ಹಾಗೂ 2015ರ ಚಾಂಪಿಯನ್), ಮರಿಯಾ ಶರಪೋವಾ(2012 ಹಾಗೂ 2014), ಲೀ ನಾ(2011) ಹಾಗೂ ಫ್ರಾನ್ಸಿಸ್ಕಾ ಸ್ಚಿಯವೊನ್(2010)ಆಡುವುದಿಲ್ಲ. ಹಾಲಿ ಚಾಂಪಿಯನ್ ಗಾರ್ಬೈನ್ ಮುಗುರುಝಗೆ ರೋಮ್ ಓಪನ್ ವೇಳೆ ಕುತ್ತಿಗೆ ನೋವು ಕಾಣಿಸಿಕೊಂಡಿದೆ. ವಿಶ್ವದ ನಂ.1 ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ರೋಮ್ ಓಪನ್‌ನಲ್ಲಿ ಬೆನ್ನುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಾಯಾಳು ನಿವೃತ್ತಿಯಾಗಿದ್ದರು. 2014ರ ಪ್ಯಾರಿಸ್ ಓಪನ್‌ನಲ್ಲಿ ರನ್ನರ್-ಅಪ್ ಆಗಿದ್ದ ಸಿಮೊನಾ ಹಾಲೆಪ್ ಈ ವರ್ಷ ರೋಮ್ ಓಪನ್‌ನ ಫೈನಲ್‌ಗೆ ತಲುಪಿದ್ದು, ಫ್ರೆಂಚ್ ಓಪನ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News