ಆಟಗಾರರನ್ನು ಮೈದಾನದಿಂದ ಹೊರಕಳುಹಿಸಲು ಅಂಪೈರ್‌ಗೆ ಅಧಿಕಾರ

Update: 2017-05-25 17:28 GMT

ಲಂಡನ್, ಮೇ 25: ಎಲ್ಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ತೀರ್ಪು ಪರಾಮರ್ಶೆ ನಿಯಮ(ಡಿಆರ್‌ಎಸ್) ಬಳಕೆ, ಆನ್‌ಫೀಲ್ಡ್ ಅಂಪೈರ್‌ಗಳಿಗೆ ಮೈದಾನದಲ್ಲಿ ಅಸಭ್ಯವಾಗಿ ವರ್ತಿಸುವ ಆಟಗಾರರನ್ನು ಮೈದಾನದಿಂದ ಹೊರಕಳುಹಿಸುವ ಅಧಿಕಾರ ನೀಡಲು ಭಾರತದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅಧ್ಯಕ್ಷತೆಯ ಐಸಿಸಿ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿದೆ. ಭವಿಷ್ಯದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿರ್ಣಾಯಕವಾಗಿರುವ ಟೆಸ್ಟ್ ಕ್ರಿಕೆಟ್ ಸ್ಪರ್ಧೆಯನ್ನು ಜಾರಿಗೆ ತರಲು ಒಮ್ಮತದ ಬೆಂಬಲ ನೀಡಲಾಗಿದ್ದು, ಕ್ರಿಕೆಟ್‌ನ್ನು ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಸೇರ್ಪಡೆಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

 ಹೊಸ ಕ್ರಿಕೆಟ್ ಕಾನೂನು(2017ರ ಕೋಡ್) ಜಾರಿಗೆ ತರಲು ನಿರ್ಧರಿಸಿರುವ ಸಮಿತಿಯು ಕಾನೂನಿನಲ್ಲಿ ಸಮಗ್ರ ಬದಲಾವಣೆ ಅಳವಡಿಸಿಕೊಂಡು ಅಂಪೈರ್‌ಗಳಿಗೆ ಮೈದಾನದಲ್ಲಿ ತೀರಾ ಅಸಭ್ಯವಾಗಿ ವರ್ತಿಸುವ, ಹಿಂಸಾಚಾರ ನಡೆಸುವ ಆಟಗಾರರನ್ನು ಹೊರಕಳುಹಿಸುವ ಅಧಿಕಾರ ನೀಡಲು ನಿರ್ಧರಿಸಲಾಗಿದೆ.

‘‘ನಾವು ಕಳೆದ ಕೆಲವು ದಿನಗಳಿಂದ ಕ್ರಿಕೆಟ್‌ಗೆ ಸಂಬಂಧಿಸಿದ ವಿಷಯವನ್ನು ಚರ್ಚಿಸಿದ್ದೇವೆ. ಇದರಲ್ಲಿ ಹಲವು ಮುಖ್ಯಾಂಶಗಳಿವೆ. ಎಂಸಿಸಿ ಜಾರಿಗೆ ತಂದಿರುವ ಹಲವು ನಿಯಮವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದು, ಇದರಲ್ಲಿ ಬ್ಯಾಟ್‌ಗಳ ಆಕಾರದಲ್ಲಿ ಬದಲಾವಣೆ ತರುವುದೂ ಸೇರಿದೆ’’ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ಐಸಿಸಿ ಕ್ರಿಕೆಟ್ ಸಮಿತಿಯಲ್ಲಿ ಕ್ಲಾರ್ ಕೊನರ್, ರಾಹುಲ್ ದ್ರಾವಿಡ್, ಅಡ್ರಿಯನ್ ಗ್ರಿಫಿತ್ಸ್, ಮಹೇಲ ಜಯವರ್ಧನೆ, ಡೇವಿಡ್ ಕೆಂಡಿಕ್ಸ್, ರಿಚರ್ಡ್ ಕೆಟೆಲ್‌ಬೊರಫ್, ಡರೆನ್ ಲೆಹ್ಮಾನ್, ರಂಜನ್ ಮದುಗಲ್ಲೆ, ಟಿಮ್ ಮೇ, ಕೇವಿನ್ ಒ’ಬ್ರಿಯನ್, ಶಾನ್ ಪೊಲಾಕ್, ಜಾನ್ ಸ್ಟಿಫನ್‌ಸನ್, ಆ್ಯಂಡ್ರು ಸ್ಟ್ರಾಸ್, ಡೇವಿಡ್ ವೈಟ್ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News