ಮೊದಲ ಏಕದಿನ: ಮೊರ್ಗನ್ ಶತಕ; ದಕ್ಷಿಣ ಆಫ್ರಿಕವನ್ನು ಮಣಿಸಿದ ಇಂಗ್ಲೆಂಡ್

Update: 2017-05-25 17:36 GMT

 ಹೆಡ್ಡಿಂಗ್ಲೆ,ಮೇ 25: ನಾಯಕ ಇಯಾನ್ ಮೊರ್ಗನ್ ಬಾರಿಸಿದ ಆಕರ್ಷಕ ಶತಕದ ಸಹಾಯದಿಂದ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಅಹರ್ನಿಶಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 72 ರನ್‌ಗಳ ಅಂತರದಿಂದ ಜಯ ಸಾಧಿಸಿದೆ.

ವಿಶ್ವದ ನಂ.1 ತಂಡದ ವಿರುದ್ಧ ಜಯ ಸಾಧಿಸಿರುವ ಇಂಗ್ಲೆಂಡ್ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

  ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 340 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡದ ಪರ 2ನೆ ವಿಕೆಟ್‌ಗೆ 112 ರನ್ ಜೊತೆಯಾಟ ನಡೆಸಿದ್ದ ಹಾಶಿಮ್ ಅಮ್ಲ (73)ಹಾಗೂ ಎಫ್‌ಡು ಪ್ಲೆಸಿಸ್(65) ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಈ ಇಬ್ಬರು ಒಟ್ಟಿಗೆ ಔಟಾದಾಗ ಆಫ್ರಿಕದ ಸ್ಕೋರ್ 3 ವಿಕೆಟ್‌ಗೆ 149.

ಆಮ್ಲ-ಪ್ಲೆಸಿಸ್ ಔಟಾದ ಬಳಿಕ ಆಫ್ರಿಕದ ಇನಿಂಗ್ಸ್‌ನಲ್ಲಿ ಚೇತರಿಕೆ ಕಾಣಲಿಲ್ಲ. ನಾಯಕ ಎಬಿಡಿ ವಿಲಿಯರ್ಸ್ 45 ರನ್ ಗಳಿಸಿದರೂ ಆಫ್ರಿಕ ತಂಡ ಇನ್ನೂ 5 ಓವರ್‌ಗಳ ಆಟ ಬಾಕಿ ಇರುವಾಗಲೇ 267 ರನ್‌ಗೆ ಆಲೌಟಾಯಿತು.

ಇದಕ್ಕೆ ಮೊದಲು ಮೊರ್ಗನ್(107 ರನ್,93 ಎಸೆತ, 7ಬೌಂಡರಿ,5 ಸಿಕ್ಸರ್) ಅವರ 10ನೆ ಏಕದಿನ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 339 ರನ್ ಗಳಿಸಿತ್ತು.

ಇಂಗ್ಲೆಂಡ್ 198 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಎಡಗೈ ಬ್ಯಾಟ್ಸ್‌ಮನ್ ಮೊಯಿನ್ ಅಲಿ(ಅಜೇಯ 77) ಅವರೊಂದಿಗೆ 7ನೆ ವಿಕೆಟ್‌ಗೆ 117 ರನ್ ಸೇರಿಸಿದ ಮೊರ್ಗನ್ ತಂಡ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು. ಮೊರ್ಗನ್ ಹಾಗೂ ಅಲಿ ತಲಾ 5 ಸಿಕ್ಸರ್‌ಗಳನ್ನು ಬಾರಿಸಿ ತಂಡದ ಸ್ಕೋರನ್ನು ಹೆಚ್ಚಿಸಿದರು. ಆಂಗ್ಲರ ಪರ ಹೇಲ್ಸ್(61), ರೂಟ್(37) ಹಾಗೂ ಸ್ಟೋಕ್ಸ್ 25 ರನ್ ಕೊಡುಗೆ ನೀಡಿದರು.

ಬೌಲಿಂಗ್‌ನಲ್ಲಿ 50 ರನ್‌ಗೆ 2 ವಿಕೆಟ್ ಪಡೆದು ಮಿಂಚಿದ್ದ ಅಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ 2ನೆ ಪಂದ್ಯ ಶನಿವಾರ ನಡೆಯಲಿದೆ. ಸೋಮವಾರ ಲಾರ್ಡ್ಸ್‌ನಲ್ಲಿ 3ನೆ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯುವುದು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 50 ಓವರ್‌ಗಳಲ್ಲಿ 339/6

(ಮೊರ್ಗನ್ 107, ಅಲಿ ಅಜೇಯ 77, ಹೇಲ್ಸ್ 61, ರೂಟ್ 37, ಮೊರಿಸ್ 2-61, ಫೆಲುಕ್ವಾಯೊ 2-59)

ದಕ್ಷಿಣ ಆಫ್ರಿಕ: 45 ಓವರ್‌ಗಳಲ್ಲಿ 267 ರನ್‌ಗೆ ಆಲೌಟ್

(ಅಮ್ಲ 73, ಪ್ಲೆಸಿಸ್ 67, ಡಿವಿಲಿಯರ್ಸ್ 45, ವೋಕ್ಸ್ 4-38, ರಶೀದ್ 2-69, ಅಲಿ 2-50)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News