ಕಿವೀಸ್ ಕಿವಿ ಹಿಂಡಿದ ಬಾಂಗ್ಲಾದೇಶ

Update: 2017-05-25 17:50 GMT

 ಡಬ್ಲಿನ್, ಮೇ 25: ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್(65) ಹಾಗೂ ಶಬ್ಬೀರ್ರಹ್ಮಾನ್(65) ಅರ್ಧಶತಕ, ನಾಯಕ ಮುಶ್ಫಿಕುರ್ರಹೀಂ(ಅಜೇಯ 45) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಬಾಂಗ್ಲಾದೇಶ ತಂಡ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಕಿವೀಸ್ ವಿರುದ್ಧ ಅದರದೇ ನೆಲದಲ್ಲಿ ಮೊದಲ ಬಾರಿ ಏಕದಿನ ಪಂದ್ಯ ಜಯಿಸಿದ ಸಾಧನೆ ಮಾಡಿದೆ.

 ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲೆಂಡ್ ತಂಡ ಲಥಾಮ್(84 ರನ್), ಬ್ರೂಮ್(63) ಹಾಗೂ ರಾಸ್ ಟೇಲರ್(ಅಜೇಯ 60) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 270 ರನ್ ಗಳಿಸಿತು. ಬಾಂಗ್ಲಾದ ಪರ ಮೊರ್ತಝಾ(2-52), ನಾಸಿರ್ ಹುಸೇನ್(2-47) ಹಾಗೂ ಹಸನ್(2-41)ತಲಾ ಒಂದು ವಿಕೆಟ್ ಪಡೆದರು.

ಗೆಲ್ಲಲು 271 ರನ್ ಸವಾಲು ಪಡೆದ ಬಾಂಗ್ಲಾದೇಶ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಸೇರಿತು.

ಬಾಂಗ್ಲಾದೇಶ ಮೊದಲ ಓವರ್‌ನ 3ನೆ ಎಸೆತದಲ್ಲಿ ಸೌಮ್ಯ ಸರ್ಕಾರ್(0) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಎರಡನೆ ವಿಕೆಟ್‌ಗೆ 143 ರನ್ ಜೊತೆಯಾಟ ನಡೆಸಿದ ಇಕ್ಬಾಲ್(65, 80 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಶಬ್ಬೀರ್ರಹ್ಮಾನ್(65, 83 ಎಸೆತ, 9 ಬೌಂಡರಿ) ತಂಡವನ್ನು ಆಧರಿಸಿದರು. ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿದ್ದ ಬಾಂಗ್ಲಾ17 ಎಸೆತಗಳಲ್ಲಿ 160 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

ಮುಶ್ಫಿಕುರ್ರಹೀಂ(ಅಜೇಯ 45) ಹಾಗೂ ಶಾಕಿಬ್ ಅಲ್ ಹಸನ್(19) 5ನೆ ವಿಕೆಟ್‌ಗೆ 39 ರನ್ ಸೇರಿಸಿ ತಂಡವನ್ನು ಆಧರಿಸಿದರು. ಹಸನ್ ಔಟಾದ ಬಳಿಕ ಮಹ್ಮೂದುಲ್ಲಾ(ಅಜೇಯ 46) ಅವರೊಂದಿಗೆ 6ನೆ ವಿಕೆಟ್‌ಗೆ 72 ರನ್ ಜೊತೆಯಾಟ ನಡೆಸಿದ ಮುಶ್ಫಿಕುರ್ರಹೀಂ ಬಾಂಗ್ಲಾದೇಶಕ್ಕೆ ಮಹತ್ವದ ಗೆಲುವು ತಂದುಕೊಟ್ಟರು.

ಕಿವೀಸ್‌ನ್ನು ಮಣಿಸಿರುವ ಬಾಂಗ್ಲಾದೇಶ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು ಒಂದುವಾರ ಬಾಕಿ ಇರುವಾಗ ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡಿದ್ದಲ್ಲದೆ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ 6ನೆ ಸ್ಥಾನಕ್ಕೆ ಭಡ್ತಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News