ಮುಸ್ಲಿಮ್ ನಿಷೇಧ ಆದೇಶ ಮರುಸ್ಥಾಪಿಸಲು ಮೇಲ್ಮನವಿ ನ್ಯಾಯಾಲಯ ನಕಾರ

Update: 2017-05-26 14:52 GMT

ವಾಶಿಂಗ್ಟನ್, ಮೇ 26: ಆರು ಮುಸ್ಲಿಮ್ ಬಾಹುಳ್ಯದ ದೇಶಗಳ ಜನರು ಅಮೆರಿಕಕ್ಕೆ ಪ್ರಯಾಣಿಸುವುದನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ಮರು ಪ್ರತಿಷ್ಠಾಪಿಸಲು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ಗುರುವಾರ ನಿರಾಕರಿಸಿದೆ.

 ಮುಖ್ಯ ನ್ಯಾಯಾಧೀಶ ರೋಜರ್ ಗ್ರೆಗರಿ ಬರೆದ ತೀರ್ಪು, ಟ್ರಂಪ್‌ರ ಆದೇಶವನ್ನು ಕಠಿಣ ಪದಗಳನ್ನು ಬಳಸಿ ಟೀಕಿಸಿದೆ. ‘‘ಆದೇಶವು ರಾಷ್ಟ್ರೀಯ ಭದ್ರತೆಯೆಂಬ ಅಸ್ಪಷ್ಟ ಪದಗಳನ್ನು ಬಳಸಿದೆ, ಆದರೆ, ವಾಸ್ತವಿಕವಾಗಿ ಧಾರ್ಮಿಕ ಅಸಹಿಷ್ಣುತೆ, ದ್ವೇಷ ಮತ್ತು ತಾರತಮ್ಯವನ್ನು ಹೊಂದಿದೆ’’ ಎಂದು ತೀರ್ಪು ಹೇಳಿದೆ.

ಒಂದು ಧರ್ಮವನ್ನು ನಿರ್ಲಕ್ಷಿಸಿ ಇನ್ನೊಂದು ಧರ್ಮವನ್ನು ಪುರಸ್ಕರಿಸುವುದನ್ನು ನಿಷೇಧಿಸುವ ಅಮೆರಿಕದ ಸಂವಿಧಾನವನ್ನು ಈ ಆದೇಶ ಉಲ್ಲಂಘಿಸುತ್ತದೆ ಎಂಬ ನೆಲೆಯಲ್ಲಿ ಆದೇಶವನ್ನು ಪ್ರಶ್ನಿಸಿದವರು ಸರಿಯಾದ ಕ್ರಮವನ್ನೇ ತೆಗೆದುಕೊಂಡಿದ್ದಾರೆ ಎಂದು ಅಮೆರಿಕದ ನಾಲ್ಕನೆ ಮೇಲ್ಮನವಿ ಸರ್ಕೀಟ್ ನ್ಯಾಯಾಲಯ ಹೇಳಿದೆ.

ನ್ಯಾಯಾಲಯವು 10-3ರ ಬಹುಮತದಿಂದ ಈ ತೀರ್ಪು ನೀಡಿದೆ.

2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮ್ ನಿಷೇಧಕ್ಕೆ ಕರೆ ನೀಡುವ ಟ್ರಂಪ್‌ರ ಹೇಳಿಕೆಗಳನ್ನು ನ್ಯಾಯಾಧೀಶ ಗ್ರೆಗರಿ ಉಲ್ಲೇಖಿಸಿದರು.

ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಕರೆ ನೀಡುವ ಟ್ರಂಪ್ ಹೇಳಿಕೆಯನ್ನು ಅವರ ವೆಬ್‌ಸೈಟ್‌ನಲ್ಲಿ ಹಾಕಲಾಗಿತ್ತು.

ಆದೇಶದ ಪ್ರಾಥಮಿಕ ಉದ್ದೇಶವು ಜನರನ್ನು ಅವರ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಅಮೆರಿಕದಿಂದ ಹೊರಗಿಡುವುದು ಎನ್ನುವ ತೀರ್ಮಾನಕ್ಕೆ ಓರ್ವ ಸಾಮಾನ್ಯ ಪ್ರಜ್ಞೆಯುಳ್ಳ ವ್ಯಕ್ತಿ ಬರುತ್ತಾನೆ ಎಂದು ತೀರ್ಪು ಹೇಳಿದೆ.

ಸುಪ್ರೀಂ ಕೋರ್ಟ್‌ಗೆ ಸರಕಾರ ಮೊರೆ

ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು ಸರಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಅಟಾರ್ನಿ ಜನರಲ್ ಜೆಫ್ ಸೆಶನ್ಸ್ ಗುರುವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕ ದಾಳಿಯನ್ನು ತಡೆಯಲು ತಾತ್ಕಾಲಿಕ ಪ್ರಯಾಣ ನಿಷೇಧ ಅಗತ್ಯವಾಗಿದೆ ಎಂದು ಸರಕಾರ ಭಾವಿಸುತ್ತದೆ ಎಂದರು.

 ‘‘ಇದು ನಿಜವಾಗಿಯು ಅತ್ಯಂತ ಅಪಾಯಕಾರಿ ಸಮಯ. ಭಯೋತ್ಪಾದಕರು ಅಮೆರಿಕವನ್ನು ಪ್ರವೇಶಿಸಿ ರಕ್ತಪಾತ ಮತ್ತು ಹಿಂಸಾಚಾರವನ್ನು ನಡೆಸುವುದನ್ನು ತಡೆಯಲು ಎಲ್ಲ ಲಭ್ಯವಿರುವ ಸಾಧನಗಳು ನಮ್ಮ ಬಳಿ ಇರಬೇಕಾಗಿದೆ’’ ಎಂದು ಶ್ವೇತಭವನದ ವಕ್ತಾರ ಮೈಕಲ್ ಶಾರ್ಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News