ಪ್ರೊ ಕಬಡ್ಡಿಯ ಎರಡನೆ ದುಬಾರಿ ಆಟಗಾರ ರೋಹಿತ್ ಕುಮಾರ್

Update: 2017-05-26 17:59 GMT

 ಹೊಸದಿಲ್ಲಿ, ಮೇ 26: ದಿಲ್ಲಿ ಸಮೀಪದ ನಿಜಾಮ್‌ಪುರ ಗ್ರಾಮದ ರೋಹಿತ್ ಕುಮಾರ್ ಬಾಲ್ಯದಿಂದಲೇ ಕಬಡ್ಡಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದರು. ರೋಹಿತ್ ತಂದೆ ಕೂಡ ಕಬಡ್ಡಿ ಆಟಗಾರನಾಗಿದ್ದ ಕಾರಣ ರೋಹಿತ್‌ಗೆ ಕಬಡ್ಡಿ ರಕ್ತಗತವಾಗಿ ಬಂದಿತ್ತು. ಅವರು ಹುಟ್ಟಿ ಬೆಳೆದ ಗ್ರಾಮದಲ್ಲಿ ರಾಕೇಶ್ ಕುಮಾರ್, ಮಂಜೀತ್ ಚಿಲ್ಲಾರ್ ಹಾಗೂ ಅಮಿತ್ ಚಿಲ್ಲಾರ್ ಅವರಂತಹ ರಾಷ್ಟ್ರೀಯ ಆಟಗಾರರು ಬೆಳಕಿಗೆ ಬಂದಿದ್ದಾರೆ. ರೋಹಿತ್‌ರ ತಂದೆ ಮಾತ್ರವಲ್ಲ ಅವರ ಇಬ್ಬರು ಚಿಕ್ಕಪ್ಪಂದಿರು ಕಬಡ್ಡಿ ಆಟಗಾರರಾಗಿದ್ದರು.

ರೋಹಿತ್ ತನ್ನ 9ರ ಪ್ರಾಯದಲ್ಲಿ ಕಬಡ್ಡಿ ಆಡುವುದರಲ್ಲಿ ಕಾಲ ಕಳೆಯುತ್ತಿದ್ದರು. ಅಣ್ಣಂದಿರು ಕಬಡ್ಡಿ ಆಡುವುದನ್ನು ನೋಡುತ್ತಿದ್ದರು. ತಂದೆಯ ಪ್ರೋತ್ಸಾಹದಿಂದಾಗಿ ಕ್ರೀಡೆಯಲ್ಲಿ ಹೆಸರು ಮಾಡುವ ಕನಸು ಕಾಣಲಾರಂಭಿಸಿದರು. ತನ್ನ ಶಿಕ್ಷಣದತ್ತಲೂ ಗಮನ ನೀಡಿದರು. ಶಾಲೆಯಲ್ಲಿ ಅಂಡರ್-14 ತಂಡದಲ್ಲಿ ಮೊದಲ ಬಾರಿ ಯಶಸ್ಸಿನ ಸವಿ ಉಂಡಿದ್ದರು. ದಿಲ್ಲಿ ರಾಜ್ಯ ತಂಡದ ಪರ ಚಿನ್ನದ ಪದಕ ಜಯಿಸಿದರು. ಆ ನಂತರ ಅವರು ಹಿಂದಿರುಗಿ ನೋಡಲೇ ಇಲ್ಲ.

ಇಂಟರ್‌ಮಿಡಿಯೇಟ್ ಪೂರ್ಣಗೊಳಿಸಿದ ತಕ್ಷಣ ಭಾರತೀಯ ನೌಕಾ ಪಡೆಯಲ್ಲಿ ಕೆಲಸ ಗಿಟ್ಟಿಸಿಕೊಂಡರು.

ಜು.28 ರಿಂದ ಆರಂಭವಾಗಲಿರುವ ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗಾಗಿ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ರೋಹಿತ್ 2ನೆ ಗರಿಷ್ಠ ಮೊತ್ತಕ್ಕೆ ಹರಾಜಾಗಿದ್ದಾರೆ. ನಿತಿನ್ ಥೋಮರ್ 93 ಲಕ್ಷ ರೂ.ಗೆ ಮಾರಾಟವಾದಾಗ ರೋಹಿತ್ 1 ಕೋಟಿ ರೂ. ದಾಟಲಿದ್ದಾರೆಂಬ ನಿರೀಕ್ಷೆ ಮೂಡಿಸಿದ್ದರು. ರೋಹಿತ್‌ರನ್ನು ಖರೀದಿಸಲು ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರಟ್ಸ್ ನಡುವೆ ಪೈಪೋಟಿ ಕಂಡುಬಂದಿದ್ದು, ಬುಲ್ಸ್ ತಂಡ 81 ಲಕ್ಷ ರೂ.ಗೆ ರೋಹಿತ್‌ರನ್ನು ಖರೀದಿಸಿತ್ತು.

ರೋಹಿತ್ ಕುಮಾರ್ ಪ್ರೊ ಕಬಡ್ಡಿಯ ಮೊದಲೆರಡು ಆವೃತ್ತಿಗಳಲ್ಲಿ ಆಡಿರಲಿಲ್ಲ. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ರೋಹಿತ್‌ಗೆ ಲೀಗ್‌ನಲ್ಲಿ ಆಡಲು ಅನುಮತಿ ನೀಡಿರಲಿಲ್ಲ. 3ನೆ ಆವೃತ್ತಿಯಲ್ಲಿ ಪಾಟ್ನಾ ಪೈರಟ್ಸ್ ತಂಡದ ಪರ ಆಡಿದ್ದರು. 109 ಅಂಕಗಳೊಂದಿಗೆ 3ನೆ ಶ್ರೇಷ್ಠ ಸ್ಕೋರರ್ ಎನಿಸಿಕೊಂಡಿದ್ದರು. 4ನೆ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಪ್ರತಿನಿಧಿಸಿದ್ದ ರೋಹಿತ್ ಎರಡನೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಕಬಡ್ಡಿಯಲ್ಲಿ ಸ್ಟಾರ್ ರೈಡರ್ ಆಗಿರುವ ರೋಹಿತ್ ಈ ವರ್ಷ ಸ್ವಿಮ್ಮಿಂಗ್‌ನಲ್ಲಿ ಸಾಧನೆ ಮಾಡುವ ಯೋಚನೆಯಲ್ಲಿದ್ದಾರೆ. 3 ತಿಂಗಳ ಕಾಲ ನಡೆಯಲಿರುವ ಟೂರ್ನಮೆಂಟ್‌ನಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿರುವ ರೋಹಿತ್ ಈ ವರ್ಷ ಗರಿಷ್ಠ ಸ್ಕೋರ್ ಗಳಿಸುವ ಭರವಸೆ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News