ಫ್ರೆಂಚ್ ಓಪನ್ ಡ್ರಾ: ಸೆಮಿಫೈನಲ್‌ನಲ್ಲಿ ನಡಾಲ್‌ಗೆ ಜೊಕೊವಿಕ್ ಎದುರಾಳಿ?

Update: 2017-05-26 18:18 GMT

ಪ್ಯಾರಿಸ್, ಮೇ 26: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಹಾಗೂ 9 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಪ್ರತಿಷ್ಠಿತ ಫ್ರೆಂಚ್ ಓಪನ್‌ನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

 ಶುಕ್ರವಾರ ನಡೆದ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದ ಡ್ರಾ ಪ್ರಕ್ರಿಯೆಯಲ್ಲಿ ಎದುರಾಳಿಗಳನ್ನು ನಿರ್ಧರಿಸಲಾಗಿದೆ.

ನಡಾಲ್ ಫ್ರೆಂಚ್ ಓಪನ್‌ನಲ್ಲಿ 10ನೆ ಪ್ರಶಸ್ತಿ ಗೆಲ್ಲುವತ್ತ ಚಿತ್ತವಿರಿಸಿದ್ದಾರೆ. ದ್ವಿತೀಯ ಶ್ರೇಯಾಂಕದ ಜೊಕೊವಿಕ್ ತನ್ನ ಹೊಸ ಕೋಚ್ ಆ್ಯಂಡ್ರೆ ಅಗಾಸ್ಸಿ ಮಾರ್ಗದರ್ಶನದಲ್ಲಿ ಫ್ರೆಂಚ್ ಓಪನ್ ಕಿರೀಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಯೋಚನೆಯಲ್ಲಿದ್ದಾರೆ.

4ನೆ ಶ್ರೇಯಾಂಕದ ನಡಾಲ್ ಆವೆಮಣ್ಣಿನ ಅಂಗಳದಲ್ಲಿ ಸತತ 17 ಪಂದ್ಯಗಳನ್ನು ಜಯಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕಳೆದ ವರ್ಷ ಫ್ರೆಂಚ್ ಓಪನ್‌ನ್ನು ಜಯಿಸಿ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಜಯಿಸಿದ ಸಾಧನೆ ಮಾಡಿದ್ದ ಜೊಕೊವಿಕ್ ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿದ್ದಾರೆ. ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಸೆಮಿ ಫೈನಲ್‌ನಲ್ಲಿ 2015ರ ಚಾಂಪಿಯನ್ ಸ್ಟಾನ್ ವಾವ್ರಿಂಕರನ್ನು ಎದುರಿಸಬಹುದು.

ಮರ್ರೆ ಮೊದಲ ಸುತ್ತಿನಲ್ಲಿ ರಶ್ಯದ ಆ್ಯಂಡ್ರಿಯ ಕುಝ್ನೆಸೋವಾರನ್ನು ಮುಖಾಮುಖಿಯಾಗಲಿದ್ದಾರೆ. ಜೊಕೊವಿಕ್ ಅವರು ಮಾರ್ಸೆಲ್ ಗ್ರಾನೊಲ್ಲರ್ಸ್‌ರನ್ನು ಹಾಗೂ ನಡಾಲ್ ಅವರು ಫ್ರೆಂಚ್‌ನ ಬೆನೊಟ್ ಪೈರ್ ಅವರನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ಮರ್ರೆ ಅಂತಿಮ 8ರ ಘಟ್ಟ ತಲುಪಿದರೆ ಜಪಾನ್‌ನ ಕೀ ನಿಶಿಕೊರಿ ಅವರನ್ನು ಎದುರಿಸುವ ನಿರೀಕ್ಷೆಯಿದೆ. ಉಳಿದ ಕ್ವಾರ್ಟರ್‌ಫೈನಲ್‌ನಲ್ಲಿ ವಾವ್ರಿಂಕ ಅವರು 2014ರ ಯುಎಸ್ ಓಪನ್ ಚಾಂಪಿಯನ್ ಮರಿನ್ ಸಿಲಿಕ್, ನಡಾಲ್ ಅವರು ಕೆನಡಾದ ಮಿಲೊಸ್ ರಾವೊನಿಕ್, ಜೊಕೊವಿಕ್ ಅವರು ಡೊಮಿನಿಕ್ ಥೀಮ್‌ರನ್ನು ಎದುರಿಸುವ ಸಾಧ್ಯತೆಯಿದೆ.

ಕೆರ್ಬರ್-ಮುಗುರುಝ ನಡುವೆ ಸೆಮಿಫೈನಲ್ ಫೈಟ್

ಪ್ಯಾರಿಸ್, ಮೇ 26: ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಡ್ರಾ ಪ್ರಕ್ರಿಯೆ ನಡೆದಿದ್ದು, ಅಗ್ರ ಶ್ರೇಯಾಂಕದ ಏಂಜೆಲಿಕ್ ಕೆರ್ಬರ್ ಹಾಲಿ ಚಾಂಪಿಯನ್ ಗಾರ್ಬೈನ್ ಮುಗುರುಝರನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದ್ದಾರೆ.

ಕೆರ್ಬರ್ ಮೊದಲ ಸುತ್ತಿನಲ್ಲಿ ರಶ್ಯದ ಹಿರಿಯ ಆಟಗಾರ್ತಿ ಎಕಟೆರಿನಾ ಮಕರೋವಾರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ದ್ವಿತೀಯ ಶ್ರೇಯಾಂಕದ ಕರೊಲಿನಾ ಪ್ಲಿಸೋವಾ ಸೆಮಿ ಫೈನಲ್‌ನಲ್ಲಿ 2014ರ ರನ್ನರ್-ಅಪ್ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ. ಹಾಲೆಪ್ ಪ್ರಸ್ತುತ ಮಂಡಿನೋವಿನಿಂದ ಬಳಲುತ್ತಿದ್ದು, ಫ್ರೆಂಚ್ ಓಪನ್‌ನಲ್ಲಿ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ.

ಸೆರೆನಾ ವಿಲಿಯಮ್ಸ್, ಮರಿಯಾ ಶರಪೋವಾ ಹಾಗೂ ವಿಕ್ಟೋರಿಯ ಅಝರೆಂಕಾ ಅನುಪಸ್ಥಿತಿಯಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗ ಈ ಬಾರಿ ಮುಕ್ತವಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ದುಷ್ಕರ್ಮಿಯ ಚೂರಿ ಇರಿತದಿಂದ ಚೇತರಿಸಿಕೊಂಡಿರುವ ಝೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಫ್ರೆಂಚ್ ಓಪನ್ ಡ್ರಾನಲ್ಲಿ ಒಳಗೊಂಡಿದ್ದಾರೆ. 2 ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ಕ್ವಿಟೋವಾ ತಾನು ಸ್ಪರ್ಧಿಸಲು ಸಿದ್ಧ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಕ್ವಿಟೋವಾ ತನ್ನ ಮೇಲೆ ಚೂರಿ ದಾಳಿಯಾದ ಬಳಿಕ ಯಾವುದೇ ಟೂರ್ನಿಯಲ್ಲಿ ಆಡಿರಲಿಲ್ಲ.

15ನೆ ಶ್ರೇಯಾಂಕದ ಕ್ವಿಟೋವಾ ಮೊದಲ ಸುತ್ತಿನಲ್ಲಿ ಅಮೆರಿಕದ ಆಟಗಾರ್ತಿ ಜುಲಿಯಾ ಬೊಸೆರೆಪ್‌ರನ್ನು ಎದುರಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News