ಚಾಂಪಿಯನ್ಸ್ ಟ್ರೋಫಿ ಮೊದಲ ಅಭ್ಯಾಸ ಪಂದ್ಯ:ಭಾರತಕ್ಕೆ ಇಂದು ನ್ಯೂಝಿಲೆಂಡ್ ಎದುರಾಳಿ

Update: 2017-05-27 16:21 GMT

ಲಂಡನ್, ಮೇ 27: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮೊದಲು ರವಿವಾರ ಇಲ್ಲಿ ಮೊದಲ ಅಭ್ಯಾಸ ಪಂದ್ಯವನ್ನಾಡಲಿರುವ ಹಾಲಿ ಚಾಂಪಿಯನ್ ಭಾರತ ತಂಡ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ.

ಪ್ರಮುಖ ಆಫ್-ಸ್ಪಿನ್ನರ್ ಆರ್.ಅಶ್ವಿನ್ ಹಾಗೂ ವೇಗದ ಬೌಲರ್ ಮುಹಮ್ಮದ್ ಶಮಿಯತ್ತ ಎಲ್ಲ ಚಿತ್ತವಿದೆ.

ನಿರಂತರ ಆರು ವಾರಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಆಡಿರುವ ಭಾರತಕ್ಕೆ 50 ಓವರ್ ಪಂದ್ಯಕ್ಕೆ ಸಜ್ಜಾಗಲು ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ಈ ವರ್ಷದ ಜನವರಿಯಲ್ಲಿ ಇಂಗ್ಲೆಂಡ್‌ನ ವಿರುದ್ಧ ಕೊನೆಯ ಬಾರಿ ಏಕದಿನ ಸರಣಿಯನ್ನು ಆಡಿತ್ತು.

ಅಭ್ಯಾಸ ಪಂದ್ಯದಲ್ಲಿ ಎಲ್ಲ 15 ಆಟಗಾರರಿಗೆ ಆಡುವ ಅವಕಾಶವಿದೆ. ಎರಡು ತಿಂಗಳ ವಿರಾಮದ ಬಳಿಕ ತಂಡಕ್ಕೆ ವಾಪಸಾಗಿರುವ ಅಶ್ವಿನ್ ಮೇಲೆ ಎಲ್ಲರ ದೃಷ್ಟಿ ಹರಿದಿದೆ. ಸ್ವದೇಶದಲ್ಲಿ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಅಶ್ವಿನ್ ಐಪಿಎಲ್‌ನಲ್ಲಿ ಭಾಗವಹಿಸದೇ ವಿಶ್ರಾಂತಿ ಪಡೆದಿದ್ದರು.

ಟೀಮ್ ಮ್ಯಾನೇಜ್‌ಮೆಂಟ್ ಅಂತಿಮ 11ರ ಬಳಗದಲ್ಲಿ ಓರ್ವ ಸ್ಪೆಷಲಿಸ್ಟ್ ಸ್ಪಿನ್ನರ್‌ನ್ನು ಆಯ್ಕೆ ಮಾಡಲು ನಿರ್ಧರಿಸಿದರೆ, ಅಶ್ವಿನ್ ಅವರು ರವೀಂದ್ರ ಜಡೇಜರಿಂದ ಸ್ಪರ್ಧೆ ಎದುರಿಸಬೇಕಾಗುತ್ತದೆ. ಅಶ್ವಿನ್‌ಗೆ ಕೆನ್ ವಿಲಿಯಮ್ಸನ್, ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮ್ ವಿರುದ್ಧ ತನ್ನ ಕೌಶಲವನ್ನು ತೋರಿಸಲು ಇದು ಉತ್ತಮ ಅವಕಾಶವಾಗಿದೆ. ವೇಗದ ಬೌಲರ್ ಶಮಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕೋಲ್ಕತಾದ ಬೌಲರ್ ಶಮಿ 2015ರ ವಿಶ್ವಕಪ್‌ನಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಸೆಮಿ ಫೈನಲ್‌ನಲ್ಲಿ ಭಾರತದ ಪರ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು.

ಅತ್ಯಂತ ವೇಗವಾಗಿ ಬೌಲಿಂಗ್ ಮಾಡಬಲ್ಲ, ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡಬಲ್ಲ ಶಮಿ ಫಿಟ್ ಆದರೆ ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಲಿದೆ.

ಭುವನೇಶ್ವರ ಕುಮಾರ್, ಜಸ್‌ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾದಲ್ಲಿದ್ದಾರೆ.

ರೋಹಿತ್ ಶರ್ಮ ಮತ್ತೊಮ್ಮೆ ಭಾರತದ ಬ್ಯಾಟಿಂಗ್ ಆರಂಭಿಸುವ ಸಾಧ್ಯತೆಯಿದೆ. ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಎರಡೂವರೆ ತಿಂಗಳ ನಂತರ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗಿದ್ದ ರೋಹಿತ್ ಅವರು ವಿಜಯ್ ಹಝಾರೆ ಟ್ರೋಫಿಯಲ್ಲಿ ಹಲವು ಪಂದ್ಯಗಳನ್ನು ಆಡಿದ್ದರು. ಲೋಕೇಶ್ ರಾಹುಲ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಶಿಖರ್ ಧವನ್ ಮತ್ತೊಮ್ಮೆ ಅವಕಾಶ ಪಡೆದಿದ್ದಾರೆ. ಧವನ್ 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಪಡೆದಿದ್ದರು. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಎಂಎಸ್ ಧೋನಿ, ಯುವರಾಜ್ ಸಿಂಗ್ ಹಾಗೂ ಕೇದಾರ್ ಜಾಧವ್ ಪಾಕ್ ವಿರುದ್ಧ ಜೂ.4 ರಂದು ನಡೆಯಲಿರುವ ಟೂರ್ನಿಯ ಮೊದಲ ಪಂದ್ಯಕ್ಕೆ ಮೊದಲು ಅಗತ್ಯದ ಬ್ಯಾಟಿಂಗ್ ಅಭ್ಯಾಸ ನಡೆಸಲು ಎದುರು ನೋಡುತ್ತಿದ್ದಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ಎಂ.ಎಸ್. ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಅಜಿಂಕ್ಯ ರಹಾನೆ, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಉಮೇಶ್ ಯಾದವ್, ಭುವನೇಶ್ವರ ಕುಮಾರ್, ಮುಹಮ್ಮದ್ ಶಮಿ, ದಿನೇಶ್ ಕಾರ್ತಿಕ್, ಜಸ್‌ಪ್ರಿತ್ ಬುಮ್ರಾ.

ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ಟಾಮ್ ಲಥಾಮ್, ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಲೂಕ್ ರೊಂಚಿ, ನೀಲ್ ಬ್ರೂಮ್, ಜಿಮ್ಮಿ ನೀಶಾಮ್, ಕಾಲಿನ್ ಡಿ’ಗ್ರಾಂಡ್‌ಹೋಮ್,ಕೋರಿ ಆ್ಯಂಡರ್ಸನ್, ಮಿಚೆಲ್ ಸ್ಯಾಂಟ್ನರ್, ಜೀತನ್ ಪಟೇಲ್, ಆಡಮ್ ಮಿಲ್ನೆ, ಮಿಚೆಲ್ ಮೆಕ್ಲಿನಘನ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News