ಜಾವೆಲಿನ್ ಎಸೆತಗಾರ ರೋಹಿತ್ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣ

Update: 2017-05-27 16:24 GMT

ಹೊಸದಿಲ್ಲಿ, ಮೇ 27: ಯುವ ಜಾವೆಲಿನ್ ಎಸೆತಗಾರ ರೋಹಿತ್ ಯಾದವ್ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಇತ್ತೀಚೆಗೆ ಬ್ಯಾಂಕಾಂಗ್‌ನಲ್ಲಿ ನಡೆದಿದ್ದ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಯಿಸಿದ್ದ ಬೆಳ್ಳಿ ಪದಕವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

2016ರ ವರ್ಲ್ಡ್ ಸ್ಕೂಲ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ 16ರ ಬಾಲಕ ಯಾದವ್ ಅವರ ‘ಎ’ ಪರೀಕ್ಷೆ ಮಾದರಿಯು ಋಣಾತ್ಮಕವಾಗಿದ್ದು, ನಿಷೇಧಿತ ದ್ರವ್ಯ ‘ಸ್ಟಾನೊರೊಲೊಲ್’ ಸೇವಿಸಿರುವುದು ಪತ್ತೆಯಾಗಿದೆ.

‘‘ರೋಹಿತ್ ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಫೇಲಾಗಿದ್ದು, ಅವರನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ’’ ಎಂದು ಎಎಫ್‌ಐನ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

 ‘‘ಇದೊಂದು ‘ಎ’ ಮಾದರಿಯಾಗಿದೆ. ಎಎಫ್‌ಐ ಮೇ 23 ರಂದು ಡೋಪಿಂಗ್ ಪರೀಕ್ಷೆಯ ಫಲಿತಾಂಶವನ್ನು ಪಡೆದಿತ್ತು. ಅದೇ ದಿನ ಬ್ಯಾಂಕಾಕ್‌ನಲ್ಲಿ ಏಷ್ಯನ್ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ನಡೆದಿತ್ತು’’ ಎಂದು ಎಎಫ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಹೈದರಾಬಾದ್‌ನಲ್ಲಿ ನಡೆದಿದ್ದ ನ್ಯಾಶನಲ್ ಯೂತ್ ಚಾಂಪಿಯನ್‌ಶಿಪ್‌ನ ವೇಳೆ ಡೋಪಿಂಗ್ ಪರೀಕ್ಷೆ ನಡೆಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News