ಅಮ್ಲ ಏಕದಿನ ಕ್ರಿಕೆಟ್‌ನಲ್ಲಿ ವೇಗದ 7 ಸಾವಿರ ರನ್

Update: 2017-05-29 18:22 GMT

ಲಂಡನ್, ಮೇ 29: ದಕ್ಷಿಣ ಆಫ್ರಿಕದ ಆರಂಭಿಕ ದಾಂಡಿಗ ಹಾಶಿಮ್ ಅಮ್ಲ  ಇಂಗ್ಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 7,000 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.153ನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದ 150ನೆ ಇನಿಂಗ್ಸ್‌ನಲ್ಲಿ ಅಮ್ಲ ಅವರು 6.1ನೆ ಓವರ್‌ನಲ್ಲಿ ಫಿನ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ 7 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದರು.

ಅಮ್ಲ 60 ನಿಮಿಷಗಳ ಬ್ಯಾಟಿಂಗ್‌ನಲ್ಲಿ 54 ಎಸೆತಗಳನ್ನು 11 ಬೌಂಡರಿಗಳ ಸಹಾಯದಿಂದ 55 ರನ್ ಗಳಿಸಿ ರೊನಾಲ್ಡ್ ಜೋನ್ಸ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.ಅಮ್ಲ ಮತ್ತು ಕ್ಲಿಂಟನ್ ಕಾಕ್ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿದರು. ಅಮ್ಲ ಅವರು ಏಕದಿನ ಕ್ರಿಕೆಟ್‌ನಲ್ಲಿ ಈ ಹಿಂದೆ 2,000, 3,000, 4,000, 5,000. 6,000 ರನ್‌ಗಳನ್ನು ವೇಗವಾಗಿ ಪೂರ್ಣಗೊಳಿಸಿದ್ದರು.

ದಕ್ಷಿಣ ಆಫ್ರಿಕ ತಂಡಕ್ಕೆ ಜಯ: ದಕ್ಷಿಣ ಆಫ್ರಿಕ ತಂಡ ಮೂರನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಗೆಲುವಿಗೆ 154 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ಇನ್ನೂ 127 ಎಸೆತಗಳು ಬಾಕಿ ಇರುವಾಗಲೇ 3 ವಿೆಟ್ ನಷ್ಟದಲ್ಲಿ 156 ರನ್ ಗಳಿಸಿತು.
ಇದಕ್ಕೂ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಇಂಗ್ಲೆಂಡ್ 31.1ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟಾಗಿತ್ತು.

 ಇಂಗ್ಲೆಂಡ್ ಈ ಪಂದ್ಯದಲ್ಲಿ ಸೋತರೂ ಮೊದಲ ಹಾಗೂ ಎರಡನೆ ಏಕದಿನ ಪಂದ್ಯದಲ್ಲಿ ಜಯ ಗಳಿಸಿ3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್ ವಿವರ
ಇಂಗ್ಲೆಂಡ್ 31.1 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್(ಬೈರ್‌ಸ್ಟೋವ್ 51, ಜೋನ್ಸ್ ಔಟಾಗದೆ 37, ರಶೀದ್ 26; ರಬಡಾ 39ಕ್ಕೆ 4, ಪಾರ್ನೆಲ್ 43ಕ್ಕೆ 3, ಮಹಾರಾಜ್ 25ಕ್ಕೆ 3).
ದಕ್ಷಿಣ ಆಫ್ರಿಕ 28.5 ಓವರ್‌ಗಳಲ್ಲಿ 156/3( ಅಮ್ಲ 55, ಡಿಕಾಕ್ 34, ಡುಮಿನಿ ಔಟಾಗದೆ 28, ಡಿವಿಲಿಯರ್ಸ್‌ ಔಟಾಗದೆ 27; ಬಾಲ್ 43ಕ್ಕೆ 2).
ಪಂದ್ಯಶ್ರೇಷ್ಠ: ಕೆ.ರಬಡಾ(ದಕ್ಷಿಣ ಆಫ್ರಿಕ)
ಸರಣಿಶ್ರೇಷ್ಠ: ಇಯಾನ್ ಮೊರ್ಗನ್(ಇಂಗ್ಲೆಂಡ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News