×
Ad

ಫ್ರೆಂಚ್ ಓಪನ್: ಸಾನಿಯಾಗೆ ಸೋಲು, ಬೋಪಣ್ಣಗೆ ಮುನ್ನಡೆ

Update: 2017-05-31 23:40 IST

ಪ್ಯಾರಿಸ್, ಮೇ 31: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾರತದ ಸಾನಿಯಾ ಮಿರ್ಝಾ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಮೊದಲ ಸುತ್ತಿನಲ್ಲಿ ಸೋತು ಕೂಟದಿಂದ ಹೊರ ನಡೆದಿದ್ದಾರೆ. ವರ್ಷದ ಎರಡನೆ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದ್ದಾರೆ.

ಬುಧವಾರ ನಡೆದ ಮೊದಲ ಸುತ್ತಿನ ಡಬಲ್ಸ್ ಪಂದ್ಯದಲ್ಲಿ ಕಝಕ್‌ಸ್ತಾನದ ಯರೊಸ್ಲೊವಾ ಶ್ವೆಡೊವಾರೊಂದಿಗೆ ಆಡಿದ್ದ ಸಾನಿಯಾ ಆಸ್ಟ್ರೇಲಿಯ-ರಶ್ಯದ ಜೋಡಿ ಡರಿಯಾ ಗವ್ರಿಲೊವಾ ಹಾಗೂ ಅನಸ್ಟಾಸಿಯ ಪಾವ್ಲಚೆಂಕೋವಾ ವಿರುದ್ಧ 6-7(5), 6-1, 2-6 ಸೆಟ್‌ಗಳ ಅಂತರದಿಂದ ಸೋತಿದೆ. ಫ್ರೆಂಚ್ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಹಾಗೂ ಪಾಬ್ಲೊ ಕ್ಯುವಾಸ್ ಗೆಲುವಿನ ಆರಂಭ ಪಡೆದಿದ್ದಾರೆ.

ಇಂಡೋ-ಉರುಗ್ವೆಯ 9ನೆ ಶ್ರೇಯಾಂಕದ ಜೋಡಿ ಫ್ರೆಂಚ್‌ನ ಮಥಾಯಸ್ ಬೋರ್ಗು ಹಾಗೂ ಪಾಲ್-ಹೆನ್ರಿ ಮಥಿಯೆವು ವಿರುದ್ಧ 6-1, 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿತು.

ಬೋಪಣ್ಣ ಹಾಗೂ ಕ್ಯುವಾಸ್ ಫ್ರಾನ್ಸ್‌ನ ವೈರ್ಲ್ಡ್ ಕಾರ್ಡ್ ಆಟಗಾರರ ವಿರುದ್ಧ ಯಾವುದೇ ಸಮಸ್ಯೆ ಎದುರಿಸಲಿಲ್ಲ. ಕೇವಲ 53 ನಿಮಿಷಗಳ ಆಟದಲ್ಲಿ ಪಂದ್ಯವನ್ನು ಜಯಿಸಿದ್ದರು. ಇಂಡೋ-ಉರುಗ್ವೆ ಜೋಡಿ ಈ ವರ್ಷ ಮಾಂಟೆ ಕಾರ್ಲೊ ಪ್ರಶಸ್ತಿಯನ್ನು ಜಯಿಸಿದ್ದು, ರೋಮ್‌ನಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದೆೆ.

ವಿಶ್ವದ ಮಾಜಿ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಬ್ರಿಸ್ಬೇನ್ ಓಪನ್‌ನ್ನು ಜಯಿಸುವ ಮೂಲಕ ವರ್ಷವನ್ನು ಶುಭಾರಂಭ ಮಾಡಿದ್ದರು. ಆದರೆ, ಆ ಬಳಿಕ ಮಿಯಾಮಿ ಓಪನ್‌ನಲ್ಲಿ ಮಾತ್ರ ಫೈನಲ್‌ಗೆ ತಲುಪಿದ್ದರು. ಇತ್ತೀಚೆಗೆ ಶ್ವೆಡೋವಾರೊಂದಿಗೆ ಡಬಲ್ಸ್ ಪಂದ್ಯ ಆಡಲು ಆರಂಭಿಸಿರುವ ಸಾನಿಯಾ ಮ್ಯಾಡ್ರಿಡ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಹಾಗೂ ರೋಮ್ ಓಪನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು.

ಫ್ರೆಂಚ್ ಓಪನ್‌ನಲ್ಲಿ ಸಾನಿಯಾ ಹಾಗೂ ಶ್ವೆಡೋವಾ ಮೊದಲ ಸೆಟ್‌ನ್ನು ಟೈ-ಬ್ರೇಕ್‌ನಲ್ಲಿ ಸೋತಿದ್ದಾರೆ. ಎರಡನೆ ಸೆಟ್‌ನ್ನು 6-1 ರಿಂದ ಜಯ ಸಾಧಿಸಿ ತಿರುಗೇಟು ನೀಡಿದ್ದರು. ಆದರೆ, ಮೂರನೆ ಸೆಟ್‌ನಲ್ಲಿ 2-6 ರಿಂದ ಸೋಲುವ ಮೂಲಕ ಪಂದ್ಯವನ್ನು ಸೋತಿತು.

ಸಾನಿಯಾ ಮಿಶ್ರ ಡಬಲ್ಸ್‌ನಲ್ಲಿ ಇವಾನ್ ಡೊಡಿಗ್‌ರೊಂದಿಗೆ ಆಡಲಿದ್ದಾರೆ.ಕಳೆದ ವರ್ಷ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಸಾನಿಯಾ-ಡೊಡಿಗ್ ಈವರ್ಷ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಈ ವರ್ಷ ಎರಡನೆ ಶ್ರೇಯಾಂಕದೊಂದಿಗೆ ಕಣಕ್ಕಿಳಿಯಲಿದ್ದಾರೆ.

ಜೋ-ವಿಲ್ಫ್ರೆಡ್ ಅವರ ಫ್ರೆಂಚ್ ಓಪನ್ ಅಭಿಯಾನ ಮೊದಲ ಸುತ್ತಿನಲ್ಲೇ ಕೊನೆ

ಪ್ಯಾರಿಸ್, ಮೇ 31: ಫ್ರಾನ್ಸ್ ಆಟಗಾರ ಜೋ-ವಿಲ್ಫ್ರೆಡ್ ಸೊಂಗ ಅವರ ಫ್ರೆಂಚ್ ಓಪನ್ ಅಭಿಯಾನ ಮೊದಲ ಸುತ್ತಿನಲ್ಲೇ ಕೊನೆಗೊಂಡಿದೆ.

ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಂಗ ಅವರು ಅರ್ಜೆಂಟೀನದ ರೆಂರೊ ಒಲಿವೊ ವಿರುದ್ಧ 7-5, 6-4, 6-7(6), 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಮಂಗಳವಾರದ ಪಂದ್ಯ ಭಾರೀ ಧೂಳಿನಿಂದಾಗಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬುಧವಾರ ಕೇವಲ ಒಂದು ಪಂದ್ಯ ಆಡಲು ಸಾಧ್ಯವಾಗಿದೆ. ಫ್ರಾನ್ಸ್‌ನ 12ನೆ ಶ್ರೇಯಾಂಕದ ಸೋಂಗ ಮೂರು ಮ್ಯಾಚ್ ಪಾಯಿಂಟ್‌ಗಳನ್ನು ಉಳಿಸಿದ್ದರೂ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ನಿರ್ಗಮಿಸಿದ್ದರು.

1983ರ ಬಳಿಕ ಫ್ರೆಂಚ್‌ನ ಯಾವೊಬ್ಬ ಆಟಗಾರನೂ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಜಯಿಸಿಲ್ಲ.

ಹಾಲೆಪ್, ವೀನಸ್ ವಿಲಿಯಮ್ಸ್ ಶುಭಾರಂಭ

ಪ್ಯಾರಿಸ್, ಮೇ 31: ರೋಮಾನಿಯ ಆಟಗಾರ್ತಿ ಸಿಮೊನಾ ಹಾಲೆಪ್ ಹಾಗೂ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮೂರನೆ ಶ್ರೇಯಾಂಕದ ಆಟಗಾರ್ತಿ ಹಾಲೆಪ್ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಲೋವಾಕಿಯದ ಜಾನಾ ಸೆಪೆಲೊವಾ ವಿರುದ್ಧ 6-2, 6-3 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇಟಾಲಿಯನ್ ಓಪನ್ ಫೈನಲ್ ಪಂದ್ಯದ ವೇಳೆ ಗಾಯಗೊಂಡು ಫ್ರೆಂಚ್ ಓಪನ್ ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದ್ದ ಹಾಲೆಪ್ ಅವರು ಜಾನಾ ವಿರುದ್ಧ ಕ್ಲೇ ಕೋರ್ಟ್‌ನಲ್ಲಿ ತನ್ನ ಶ್ರೇಷ್ಠ ಫಾರ್ಮ್‌ನ್ನು ಮುಂದುವರಿಸಿದರು. ವೀನಸ್ ಮೂರನೆ ಸುತ್ತಿಗೆ ತೇರ್ಗಡೆ:

ಸೂಪರ್‌ಸ್ಟಾರ್ ಸೆರೆನಾ ವಿಲಿಯಮ್ಸ್‌ನ ಸಹೋದರಿ ವೀನಸ್ ವಿಲಿಯಮ್ಸ್ ಜಪಾನ್‌ನ ಕುರುಮಿ ನಾರಾ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಮೂರನೆ ಸುತ್ತಿಗೆ ತೇರ್ಗಡೆಯಾದರು.

10ನೆ ಶ್ರೇಯಾಂಕಿತೆ ವಿಲಿಯಮ್ಸ್ ಎರಡನೆ ಸುತ್ತಿನ ಪಂದ್ಯದಲ್ಲಿ ಜಪಾನ್ ಎದುರಾಳಿಯನ್ನು 6-3, 6-1 ನೇರ ಸೆಟ್‌ಗಳಿಂದ ಸೋಲಿಸಿದರು.

ವಿಲಿಯಮ್ಸ್ 1982ರ ಬಳಿಕ ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿಗೆ ತಲುಪಿದ ಹಿರಿಯ ಆಟಗಾರ್ತಿ ಎನಿಸಿಕೊಂಡರು. 1982ರಲ್ಲಿ ಬಿಲ್ಲಿ-ಜಿನ್ ಕಿಂಗ್ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News