×
Ad

ವಿಶ್ವದ ಅಗ್ರ-100 ಅಥ್ಲೀಟ್‌ಗಳ ಪಟ್ಟಿಯಲ್ಲಿ ಕೊಹ್ಲಿ, ಧೋನಿಗೆ ಸ್ಥಾನ

Update: 2017-05-31 23:45 IST

ಹೊಸದಿಲ್ಲಿ, ಮೇ 31: ಇಎಸ್‌ಪಿಎನ್ ವರ್ಲ್ಡ್ ಫೇಮ್-100ರ ಪಟ್ಟಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಸಹಿತ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕೊಹ್ಲಿ 13ನೆ ಸ್ಥಾನದಲ್ಲಿದ್ದರೆ, ಧೋನಿ 15ನೆ ಸ್ಥಾನದಲ್ಲೂ, ಯುವರಾಜ್ ಸಿಂಗ್ ಹಾಗೂ ರೈನಾ ಕ್ರಮವಾಗಿ 90ನೆ ಹಾಗೂ 95ನೆ ಸ್ಥಾನದಲ್ಲಿದ್ದಾರೆ. ಇಎಸ್‌ಪಿಎನ್ ಬಿಡುಗಡೆ ಮಾಡಿರುವ 100 ವಿಶ್ವ ಶ್ರೇಷ್ಠ ಅಥ್ಲೀಟ್‌ಗಳು ಈಗಲೂ ಸಕ್ರಿಯರಾಗಿದ್ದಾರೆ. ಪಟ್ಟಿಯಲ್ಲಿ ರಿಯಲ್ ಮ್ಯಾಡ್ರಿಡ್ ಹಾಗೂ ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ. ರೊನಾಲ್ಡೊರ ಬಳಿಕ ಎನ್‌ಬಿಎ ಆಟಗಾರ ಲೆಬ್ರಾನ್ ಜೇಮ್ಸ್, ಬಾರ್ಸಿಲೋನ ಹಾಗೂ ಅರ್ಜೆಂಟೀನದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ಟೆನಿಸ್ ತಾರೆ ರೋಜರ್ ಫೆಡರರ್ ಅವರಿದ್ದಾರೆ.

ಅಗ್ರ-10ರಲ್ಲಿರುವ ಇತರ ಅಥ್ಲೀಟ್‌ಗಳೆಂದರೆ: ಫಿಲ್ ಮಿಕೆಲ್‌ಸನ್, ನೆಮರ್, ಉಸೇನ್ ಬೋಲ್ಟ್, ಕೇವಿನ್ ಡುರಾಂಟ್, ರಫೆಲ್ ನಡಾಲ್ ಹಾಗೂ ಟೈಗರ್ ವುಡ್ಸ್.

ಇಎಸ್‌ಪಿಎನ್ ಸ್ಪೋರ್ಟ್ಸ್ ಅನಾಲಿಸ್ಟಿಕ್ಸ್ ಡೈರೆಕ್ಟರ್ ಬೆನ್ ಅಲಮಾರ್ ರಚಿಸಿರುವ ಫಾರ್ಮುಲಾ ಪ್ರಕಾರ ರ್ಯಾಂಕಿಂಗ್‌ನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ ಜಾಹೀರಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯತೆಯೂ ಸೇರಿದೆ.

28ರ ಹರೆಯದ ಕೊಹ್ಲಿ ಫೆಬ್ರವರಿಯಲ್ಲಿ ಪುಮಾ ಶೂ ಕಂಪೆನಿಯೊಂದಿಗೆ 100 ಕೋಟಿ ರೂ.ಗೆ ಅಧಿಕ ಮೊತ್ತಕ್ಕೆ 8 ವರ್ಷಗಳ ಅವಧಿಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಬೋಲ್ಟ್, ರಿಕಿ ಫ್ಲವರ್ ಹಾಗೂ ಥಿಯೆರಿ ಹೆನ್ರಿ ಅವರೊಂದಿಗೆ ಸೇರ್ಪಡೆಯಾಗಿದ್ದರು. 2015ರಲ್ಲಿ ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗಿ ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಯೂವಿಕ್ಯಾನ್ ಫೌಂಡೇಶನ್‌ನ್ನು ಸ್ಥಾಪಿಸಿ ಕ್ಯಾನ್ಸರ್‌ನೊಂದಿಗೆ ಹೋರಾಡುವವರಿಗೆ ನೆರವಿಗೆ ಮುಂದಾಗಿದ್ದಾರೆ. ಸಾಮಾಜಿಕ ಕಳಕಳಿಯ ಮೂಲಕ ಯುವಿ ವಿಶ್ವದ ಖ್ಯಾತ ಅಥ್ಲೀಟ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News