×
Ad

ಕೊಹ್ಲಿ-ಕುಂಬ್ಳೆ ವಿವಾದ: ಬಿಸಿಸಿಐ ಸಂಧಾನಕಾರರು ಇಂಗ್ಲೆಂಡ್‌ಗೆ

Update: 2017-06-01 23:40 IST

 ಹೊಸದಿಲ್ಲಿ, ಜೂ.1: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಬಿಸಿಸಿಐನ ಇಬ್ಬರು ಅಧಿಕಾರಿಗಳು ದಿಢೀರನೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ್ದಾರೆ.

ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ದುಬೈನಲ್ಲಿ ಪಿಸಿಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಲಂಡನ್‌ಗೆ ತೆರಳುವ ಯೋಜನೆ ಈಗಾಗಲೇ ನಿಗದಿಯಾಗಿತ್ತು. ಆದರೆ, ಡಾ. ಎಂವಿ ಶ್ರೀಧರ್(ಬಿಸಿಸಿಐನ ಪ್ರಧಾನ ಪ್ರಬಂಧಕ) ಇದೀಗ ಲಂಡನ್‌ಗೆ ತೆರಳಲು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಮುಖ್ಯಸ್ಥ ವಿನೋದ್ ರಾಯ್ ಲಂಡನ್ ಭೇಟಿಯು ಪೂರ್ವ ನಿರ್ಧರಿತವಾಗಿರಲಿಲ್ಲ. 97 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಶ್ರೀಧರ್‌ಗೆ ಆಟಗಾರರು ತುಂಬಾ ಗೌರವ ನೀಡುತ್ತಾರೆ. ಕೋಚ್ ಹಾಗೂ ನಾಯಕನೊಂದಿಗೆ ಚರ್ಚಿಸಲು ವಿನೋದ್ ರಾಯ್‌ಗೆ ಶ್ರೀಧರ್ ನೆರವಾಗುವ ಸಾಧ್ಯತೆಯಿದೆ. 2007-08ರಲ್ಲಿ ಆಸ್ಟ್ರೇಲಿಯ ಪ್ರವಾಸದಲ್ಲಿ ಮಂಕಿಗೇಟ್ ಪ್ರಕರಣ ನಡೆದಿದ್ದ ಸಂದರ್ಭದಲ್ಲಿ ಶ್ರೀಧರ್ ಭಾರತ ತಂಡದ ಮೀಡಿಯಾ ಮ್ಯಾನೇಜರ್ ಆಗಿದ್ದರು. ಆ ಸಮಯದಲ್ಲಿ ಕುಂಬ್ಳೆ ಭಾರತ ತಂಡದ ನಾಯಕನಾಗಿದ್ದರು.

ಬಿಸಿಸಿಐ ಅಧಿಕಾರಿಗಳು ಗುರುವಾರ ಬರ್ಮಿಂಗ್‌ಹ್ಯಾಮ್ ತಲುಪಲಿದ್ದು, ರವಿವಾರ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News