×
Ad

ಭಾರತದ ಫೀಲ್ಡಿಂಗ್ ಕೋಚ್ ಹುದ್ದೆ ಮೇಲೆ ಕೈಫ್ ಕಣ್ಣು

Update: 2017-06-01 23:43 IST

ಹೊಸದಿಲ್ಲಿ, ಜೂ.1: ಭಾರತದ ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಭಾರತೀಯ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಹುದ್ದೆಯತ್ತ ಆಸಕ್ತಿ ಹೊಂದಿದ್ದಾರೆ.

ಟ್ವಿಟರ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳೊಂದಿಗೆ ನಡೆಸಿದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಕೈಫ್ ಈ ವಿಷಯ ಬಹಿರಂಗಪಡಿಸಿದರು.

ನೀವು ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಲು ಬಯಸಿದ್ದೀರಾ? ಎಂಬ ಅಭಿಮಾನಿಯೊಬ್ಬನ ಪ್ರಶ್ನೆಗೆ ಉತ್ತರಿಸಿದ ಕೈಫ್,‘‘ ಫೀಲ್ಡಿಂಗ್ ಕೋಚ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕಾಣಿಕೆ ನೀಡಲು ಅವಕಾಶ ಲಭಿಸಿದರೆ ಅದೊಂದು ಅದ್ಭುತ ಎನಿಸಿಕೊಳ್ಳಲಿದೆ ಎಂದರು.

ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾಗ ಕೈಫ್ ಓರ್ವ ಅತ್ಯುತ್ತಮ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಅವರ ಫೀಲ್ಡಿಂಗ್ ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕದ ಫೀಲ್ಡಿಂಗ್ ಸ್ಟಾರ್ ಜಾಂಟಿ ರೋಡ್ಸ್‌ಗೆ ಹೋಲಿಸಲಾಗುತ್ತಿತ್ತು. ಕೈಫ್ ಆಕರ್ಷಕ ಫೀಲ್ಡಿಂಗ್‌ನ ಮೂಲಕ ಭಾರತದ ಫೀಲ್ಡಿಂಗ್ ಮಟ್ಟವನ್ನು ಉನ್ನತ ಸ್ಥಾನಕ್ಕೇರಿಸಿದ್ದರು.

ಕೈಫ್ ಭಾರತದ ಪರ 125 ಏಕದಿನ ಹಾಗೂ 13 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ಕೊನೆಗೊಂಡ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಪರ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಟಿ. ಶ್ರೀಧರ್ ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿದ್ದಾರೆ. ಟೀಮ್‌ಇಂಡಿಯಾದ ಕೋಚಿಂಗ್ ಸ್ಟಾಫ್‌ನಲ್ಲಿ ಶ್ರೀಧರ್‌ರಲ್ಲದೆ ಅನಿಲ್‌ಕುಂಬ್ಳೆ(ಮುಖ್ಯ ಕೋಚ್) ಹಾಗೂ ಸಂಜಯ್ ಬಂಗಾರ್(ಬ್ಯಾಟಿಂಗ್ ಕೋಚ್) ಅವರಿದ್ದಾರೆ. ಇತ್ತೀಚೆಗೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಭಾರತದ ಬೌಲಿಂಗ್ ಕೋಚ್ ಹುದ್ದೆಗೆ ಝಹೀರ್ ಖಾನ್ ಹೆಸರನ್ನು ಉಲ್ಲೇಖಿಸಿ ಬೆಂಬಲ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News