×
Ad

ರಾಷ್ಟ್ರೀಯ ಹಾಕಿ ಅಕಾಡಮಿಗೆ ಒಲಿಂಪಿಯನ್ ಗಣೇಶ್ ಅಧ್ಯಕ್ಷ

Update: 2017-06-01 23:44 IST

ಹೊಸದಿಲ್ಲಿ, ಜೂ.1: ಭಾರತದ ಮಾಜಿ ನಾಯಕ ಹಾಗೂ ಕೋಚ್, ಕನ್ನಡಿಗ ಎಂ.ಪಿ. ಗಣೇಶ್ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿರುವ ನ್ಯಾಶನಲ್ ಹಾಕಿ ಅಕಾಡಮಿಯ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾಗಿದ್ದಾರೆ.

ಹಾಕಿ ಒಲಿಂಪಿಯನ್ ಎಂಪಿ ಗಣೇಶ್ ಅವರು ಹೊಸದಿಲ್ಲಿಯಲ್ಲಿರುವ ನ್ಯಾಶನಲ್ ಹಾಕಿ ಅಕಾಡಮಿಯ ಸಿಇಒ ಹಾಗೂ ಉನ್ನತ ನಿರ್ವಹಣೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಹಾಕಿ ಇಂಡಿಯಾ ತನ್ನ ಅಧಿಕೃತ ಟ್ವಿಟರ್‌ನಲ್ಲಿ ದೃಢಪಡಿಸಿದೆ.

ಗಣೇಶ್ ಈತನಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಸಿಇಒ ಆಗಿ ಸೇವೆ ಸಲ್ಲಿಸಿದ್ದರು.

ಹೊಸದಿಲ್ಲಿಯಲ್ಲಿರುವ ನ್ಯಾಶನಲ್ ಹಾಕಿ ಅಕಾಡಮಿ ಜೂನಿಯರ್ ಹಾಕಿ ಪ್ರತಿಭೆಯನ್ನು ಗುರುತಿಸಿ, ಅವರ ಕ್ರೀಡಾ ಬೆಳವಣಿಗೆಗೆ ಉತ್ತೇಜನ ನೀಡುವ ಗುರಿ ಹೊಂದಿದೆ.

70ರ ಪ್ರಾಯದ ಗಣೇಶ್ ಹಾಕಿಯಲ್ಲಿ ಪ್ರತಿಭಾವಂತ ಆಟಗಾರರನ್ನು ನೀಡಿರುವ ಕರ್ನಾಟಕದ ಕೊಡಗಿನವರಾಗಿದ್ದು, ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ. 1972ರಲ್ಲಿ ಮ್ಯೂನಿಚ್‌ನಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಭಾರತ ಆ ಒಲಿಂಪಿಕ್ಸ್‌ನಲ್ಲಿ 3ನೆ ಸ್ಥಾನ ಪಡೆದಿತ್ತು. 1980ರಲ್ಲಿ ಮಾಸ್ಕೊದಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡಕ್ಕೆ ಗಣೇಶ್ ಕೋಚಿಂಗ್ ನೀಡಿದ್ದರು.

ಗಣೇಶ್ ಎರಡು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 1970ರಲ್ಲಿ ಬ್ಯಾಂಕಾಕ್‌ನಲ್ಲಿ ಹಾಗೂ 1974ರಲ್ಲಿ ತೆಹ್ರಾನ್‌ನಲ್ಲಿ ಏಷ್ಯಾಕಪ್ ಆಡಿದ್ದರು. ಎರಡು ಬಾರಿಯೂ ಭಾರತ ಬೆಳ್ಳಿ ಪದಕ ಗೆದ್ದುಕೊಂಡು ಬಂದಿತ್ತು. 1971ರಲ್ಲಿ ಬಾರ್ಸಿಲೋನದಲ್ಲಿ ನಡೆದಿದ್ದ ಮೊದಲ ವಿಶ್ವಕಪ್‌ನಲ್ಲಿ ಕಂಚು ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದರು. ಆಮ್‌ಸ್ಟರ್‌ಡಮ್‌ನಲ್ಲಿ ನಡೆದ ಮತ್ತೊಂದು ಹಾಕಿ ವಿಶ್ವಕಪ್‌ನಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿದ್ದ ಗಣೇಶ್ ಬೆಳ್ಳಿ ಪದಕ ಜಯಿಸಲು ತಂಡಕ್ಕೆ ನೆರವಾಗಿದ್ದರು. ಮಂಡಿನೋವಿನಿಂದಾಗಿ ವೃತ್ತಿಜೀವನವನ್ನು ಮೊಟಕುಗೊಳಿಸಿದ್ದ ಗಣೇಶ್ 1974ರಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು.

 ನಿವೃತ್ತಿಯ ಬಳಿಕ 1988ರ ಸಿಯೊಲ್ ಒಲಿಂಪಿಕ್ಸ್, ಬರ್ಲಿನ್‌ನಲ್ಲಿ 1989ರಲ್ಲಿ ಚಾಂಪಿಯನ್ಸ್ ಟ್ರೋಫಿ, 1990ರಲ್ಲಿ ಲಕ್ನೊದಲ್ಲಿ ನಡೆದಿದ್ದ ಇಂದಿರಾ ಗಾಂಧಿ ಇಂಟರ್‌ನ್ಯಾಶನಲ್ ಹಾಕಿ ಟೂರ್ನಿ ಹಾಗೂ 1990ರಲ್ಲಿ ಕರಾಚಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಭಾರತ ತಂಡದ ಅಧಿಕೃತ ಕೋಚ್ ಆಗಿ ಗಣೇಶ್ ಕಾರ್ಯನಿರ್ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News