ಆಸ್ಟ್ರೇಲಿಯ-ನ್ಯೂಝಿಲೆಂಡ್ ಪಂದ್ಯ ಮಳೆಗಾಹುತಿ
ಬರ್ಮಿಂಗ್‌ಹ್ಯಾಮ್, ಜೂ.2: ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನ ಎರಡನೇ ಪಂದ್ಯ ಶುಕ್ರವಾರ ಮಳೆಗಾಹುತಿಯಾಗಿದ್ದು, ಉಭಯ ತಂಡಗಳು ತಲಾ 1 ಅಂಕವನ್ನು ಹಂಚಿಕೊಂಡಿದೆ.
ಮಳೆಯಿಂದಾಗಿ ಡಿಎಲ್ ನಿಯಮದಂತೆ ಗೆಲುವಿಗೆ 33 ಓವರ್‌ಗಳಲ್ಲಿ 235 ರನ್ ಗಳಿಸಬೇಕಿದ್ದ ಆಸ್ಟ್ರೇಲಿಯ 9 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 53 ರನ್ ಗಳಿಸಿದ್ದಾಗ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿದೆ. ಬಳಿಕ ಆಟ ಆರಂಭಗೊಳ್ಳಲಿಲ್ಲ. ಮಳೆಯಿಂದಾಗಿ ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ನ್ಯೂಝಿಲೆಂಡ್‌ನ ಮಿಲ್ನೆ ಮತ್ತು ಟ್ರೆಂಟ್ ಬೌಲ್ಟ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯ ತಂಡದ ಡೇವಿಡ್ ವಾರ್ನರ್ (18), ಆ್ಯರೊನ್ ಫಿಂಚ್ (8) ಮತ್ತು ಹೆನ್ರಿಕ್ಸ್(18) ಔಟಾಗಿ ಪೆವಿಲಿಯನ್ ಸೇರುವಷ್ಟರಲ್ಲಿ ಭಾರೀ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತ್ತು.
ನ್ಯೂಝಿಲೆಂಡ್ 291: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡದ ಬ್ಯಾಟಿಂಗ್‌ಗೆ ಮಳೆ ಮತ್ತು ಹೇಝಲ್‌ವುಡ್ ಪ್ರಹಾರ ಅಡ್ಡಿಯಾಗಿದ್ದರೂ 45 ಓವರ್‌ಗಳಲ್ಲಿ 291 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.
ನಾಯಕ ಕೇನೆ ವಿಲಿಯಮ್ಸ್ ಶತಕ ಮತ್ತು ವಿಕೆಟ್ ಕೀಪರ್ ಲ್ಯೂಕ್ ರೊಂಚಿ ಅರ್ಧಶತಕ ದಾಖಲಿಸಿ ನ್ಯೂಝಿಲೆಂಡ್‌ನ್ನು ಕಷ್ಟದಿಂದ ಪಾರು ಮಾಡಿದರು. ಆಸ್ಟ್ರೇಲಿಯದ ಹೇಝಲ್‌ವುಡ್ 52ಕ್ಕೆ 6 ವಿಕೆಟ್ ಉಡಾಯಿಸಿ ಮಿಂಚಿದರು.
ಮಳೆಯಿಂದಾಗಿ 4 ಓವರ್‌ಗಳು ಕಡಿತಗೊಂಡು ಪಂದ್ಯವನ್ನು 46 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ನ್ಯೂಝಿಲೆಂಡ್ 46 ಓವರ್‌ಗಳು ಪೂರ್ಣಗೊಳಿಸುವ ಮೊದಲೇ ಆಲೌಟಾಗಿದೆ.
ಇನಿಂಗ್ಸ್ ಆರಂಭಿಸಿದ ಮಾರ್ಟಿನ್ ಗಪ್ಟಿಲ್ ಮತ್ತು ರೊಂಚಿ ಮೊದಲ ವಿಕೆಟ್‌ಗೆ ಜೊತೆಯಾಟದಲ್ಲಿ 40 ರನ್ ಸೇರಿಸಿದರು. ಗಪ್ಟಿಲ್ 26 ರನ್ ಗಳಿಸಿ ಔಟಾದರು. ಬಳಿಕ ರೊಂಚಿಗೆ ವಿಲಿಯಮ್ಸನ್ ಜೊತೆಯಾದರು.
ರೊಂಚಿ ಮತ್ತು ವಿಲಿಯಮ್ಸನ್ ಎರಡನೆ ವಿಕೆಟ್‌ಗೆ 77 ರನ್ ಸೇರಿಸಿದರು.16ನೆ ಓವರ್‌ನ ನಾಲ್ಕನೆ ಎಸೆತದಲ್ಲಿ ರೊಂಚಿ ಅವರು ಹೇಸ್ಟಿಂಗ್ಸ್‌ಗೆ ವಿಕೆಟ್ ಒಪ್ಪಿಸಿದರು.ಔಟಾಗುವ ಮೊದಲು ರೊಂಚಿ 65ರನ್ (43ಎ, 9ಬೌ,3ಸಿ) ಗಳಿಸಿದರು.
ಮೂರನೆ ವಿಕೆಟ್‌ಗೆ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಜೊತೆಯಾಟದಲ್ಲಿ 99 ರನ್ ಸೇರಿಸುವ ಮೂಲಕ ತಂಡದ ಸ್ಕೋರ್‌ನ್ನು 200ರ ಗಡಿ ದಾಟಿಸಿದರು.
46ರನ್ ಗಳಿಸಿದ ರಾಸ್ ಟೇಲರ್ ಅವರು ಹೇಸ್ಟಿಂಗ್ಸ್ ಓವರ್‌ನಲ್ಲಿ ಹೆನ್ರಿಕ್ಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾಯಕ ವಿಲಿಯಮ್ಸನ್ 9ನೆ ಏಕದಿನ ಶತಕ ಗಳಿಸಿದ ಬೆನ್ನಲ್ಲೆ ರನೌಟಾದರು. ಅವರು 96 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಶತಕ ಪೂರ್ಣಗೊಳಿಸಿದರು. ವಿಲಿಯಮ್ಸ್ ಔಟಾಗುವಾಗ ತಂಡದ ಸ್ಕೋರ್ 39.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 254 ಆಗಿತ್ತು. ಬಳಿಕ 37 ರನ್ ಸೇರಿಸುವಷ್ಟರಲ್ಲಿ ನ್ಯೂಝಿಲೆಂಡ್ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್ ವಿವರ
ನ್ಯೂಝಿಲೆಂಡ್ 45 ಓವರ್‌ಗಳಲ್ಲಿ ಆಲೌಟ್ 291( ವಿಲಿಯಮ್ಸನ್ 100, ರೊಂಚಿ 65, ಟೇಲರ್ 46; ಹೇಝಲ್‌ವುಡ್ 52ಕ್ಕೆ 6, ಹೇಸ್ಟಿಂಗ್ಸ್ 69ಕ್ಕೆ 2).
ಆಸ್ಟ್ರೇಲಿಯ 9 ಓವರ್‌ಗಳಲ್ಲಿ 53/3(ವಾರ್ನರ್ 18, ಹೆನ್ರಿಕ್ಸ್ 18; ಮಿಲ್ನೆ 9ಕ್ಕೆ 2).