×
Ad

ಥಾಯ್ಲೆಂಡ್ ಜಿಪಿ ಟೂರ್ನಿ: ಸೈನಾ, ಸಾಯಿ ಪ್ರಣೀತ್ ಸೆಮಿ ಫೈನಲ್‌ಗೆ

Update: 2017-06-02 23:51 IST

 ಬ್ಯಾಂಕಾಕ್, ಜೂ.2: ಭಾರತೀಯ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಬಿ. ಸಾಯಿ ಪ್ರಣೀತ್ ಥಾಯ್ಲೆಂಡ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಪದಕ ವಿಜೇತೆ ಸೈನಾ ಜಪಾನ್‌ನ ಹಾರುಕೊ ಸುಝುಕಿ ವಿರುದ್ಧ 21-15, 20-22, 21-11 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಸೈನಾ ಶನಿವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಥಾಯ್ಲೆಂಡ್‌ನ 4ನೆ ಶ್ರೇಯಾಂಕಿತ ಆಟಗಾರ್ತಿ ಬುಸನನ್ ಒಂಗ್‌ಬುಮರುಂಗಪನ್‌ರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಾಪುರ ಓಪನ್ ಚಾಂಪಿಯನ್ ಪ್ರಣೀತ್ ಅವರು ಸ್ಥಳೀಯ ಆಟಗಾರ ಕಾಂತಫೊನ್ ವಾಂಗ್‌ಚರೊಯೆನ್‌ರನ್ನು 21-16, 21-17 ನೇರ ಗೇಮ್‌ಗಳಿಂದ ಸುಲಭವಾಗಿ ಮಣಿಸಿದರು.

ವಿಶ್ವದ ನಂ.24ನೆ ಆಟಗಾರ ಪ್ರಣೀತ್ 102ನೆ ರ್ಯಾಂಕಿನಲ್ಲಿರುವ ವಾಂಗ್‌ಚರೊಯೆನ್ ವಿರುದ್ಧ ಕೇವಲ 50 ನಿಮಿಷಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪ್ರಣೀತ್ ಕಳೆದ ವರ್ಷ ಇಂಡೋನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ವಾಂಗ್‌ಚರೊಯೆನ್ ವಿರುದ್ಧ 18-21, 21-14, 21-15 ಅಂಕಗಳ ಅಂತರದಿಂದ ಮಣಿಸಿದ್ದರು.

ಸಿಂಗಾಪುರ ಓಪನ್ ಚಾಂಪಿಯನ್ ಪ್ರಣೀತ್ ಗುರುವಾರ ನಡೆದಿದ್ದ ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯಾದ ಇಸ್ಕಂದರ್ ಝುಲ್ಕರ್‌ನೈನ್‌ರನ್ನು ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News