×
Ad

ಫ್ರೆಂಚ್ ಓಪನ್: ಮರ್ರೆ, ಜೊಕೊವಿಕ್ ಕ್ವಾರ್ಟರ್‌ಫೈನಲ್‌ಗೆ

Update: 2017-06-05 23:49 IST

 ಪ್ಯಾರಿಸ್, ಜೂ.5: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಹಾಗೂ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮರ್ರೆ ರಶ್ಯದ ಶ್ರೇಯಾಂಕರಹಿತ ಕರೆನ್ ಖಚನೊವ್‌ರನ್ನು 6-3, 6-4, 6-4 ಸೆಟ್‌ಗಳ ಅಂತರದಿಂದ ಮಣಿಸಿ ಅಂತಿಮ-8ರ ಸುತ್ತಿಗೆ ತೇರ್ಗಡೆಯಾದರು.

 ಮೂರನೆ ಗ್ರಾನ್‌ಸ್ಲಾಮ್ ಟೂರ್ನಿಯನ್ನು ಆಡುತ್ತಿರುವ 21ರ ಹರೆಯದ ಖಚನೊವ್ ಬ್ರಿಟನ್ ಆಟಗಾರ ವಿರುದ್ಧ ಒಂದಷ್ಟು ಪ್ರತಿರೋಧ ಒಡ್ಡಿದ್ದರು. ಆದರೆ, ಮೂರು ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ ಮರ್ರೆ ಏಳನೆ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು.

ಮರ್ರೆ ಮುಂದಿನ ಸುತ್ತಿನಲ್ಲಿ ಜಪಾನ್‌ನ ಕೀ ನಿಶಿಕೊರಿಯನ್ನು ಎದುರಿಸಲಿದ್ದಾರೆ. ನಿಶಿಕೊರಿ ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊರನ್ನು 0-6, 6-4, 6-4, 6-0 ಅಂತರದಿಂದ ಮಣಿಸಿದ್ದಾರೆ.

ರವಿವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಯ ಸಾಧಿಸಿದ್ದ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

 ಜೊಕೊವಿಕ್ ಅವರು ಅಲ್ಬರ್ಟೊ ರಾಮೊಸ್- ವಿನೊಲಸ್‌ರನ್ನು 7-6(5), 6-1, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಫಾರ್ಮ್‌ನಲ್ಲಿರುವ ಆಸ್ಟ್ರೀಯ ಆಟಗಾರ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ.

ವೃತ್ತಿಪರ ಟೆನಿಸ್ ಯುಗದಲ್ಲಿ ಪ್ರಮುಖ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ತಲಾ ಎರಡು ಬಾರಿ ಜಯಿಸಿದ ಮೊದಲ ಆಟಗಾರ ಎನಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿರುವ ಸರ್ಬಿಯದ ಜೊಕೊವಿಕ್ ಮೊದಲ ಹಾಗೂ ಮೂರನೆ ಸೆಟ್‌ನಲ್ಲಿ ಎದುರಾಳಿ ಆಟಗಾರನಿಂದ ಒಂದಷ್ಟು ಪ್ರತಿರೋಧ ಎದುರಿಸಿದ್ದರು.

ಸಿಮೊನಾ ಹಾಲೆಪ್ ಕ್ವಾರ್ಟರ್ ಫೈನಲ್‌ಗೆ

ಪ್ಯಾರಿಸ್, ಜೂ.5: ಮೂರನೆ ಶ್ರೇಯಾಂಕದ, 2014ರ ರನ್ನರ್-ಅಪ್ ಸಿಮೊನಾ ಹಾಲೆಪ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-8ರ ಹಂತ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲೆಪ್ ಅವರು ಸ್ಪೇನ್‌ನ ಕಾರ್ಲ ಸುಯರೆಝ್ ನವಾರ್ರೊ ಅವರನ್ನು 6-1, 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಪ್ರಶಸ್ತಿ ಜಯಿಸಬಲ್ಲ ಓರ್ವ ಫೇವರಿಟ್ ಆಟಗಾರ್ತಿಯಾಗಿರುವ ಹಾಲೆಪ್ ಬರೋಬ್ಬರಿ ಒಂದು ಗಂಟೆ ಕಾಲ ನಡೆದ ಪಂದ್ಯದಲ್ಲಿ 21ನೆ ಶ್ರೇಯಾಂಕದ ಸುಯರೆಝ್‌ರನ್ನು ಸೋಲಿಸಿದರು.

ಆವೆಮಣ್ಣಿನ ಅಂಗಳದಲ್ಲಿ ಕಳೆದ ಆರು ಪ್ರಯತ್ನದಲ್ಲಿ ಮೊದಲ ಬಾರಿ ರೊಮಾನಿಯದ ಹಾಲೆಪ್ ಅವರು ಸುಯರೆಝ್ ನವಾರ್ರೊ ವಿರುದ್ಧ ಜಯ ಸಾಧಿಸಿದ್ದಾರೆ.

ಹಾಲೆಪ್ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನ ದೃಢಪಡಿಸಿಕೊಳ್ಳಲು ಉಕ್ರೇನ್‌ನ ಎಲಿನಾ ಸ್ವಿಟೋಲಿನಾರನ್ನು ಎದುರಿಸಲಿದ್ದಾರೆ. ಎಲಿನಾ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊಯೇಷಿಯದ ಪೆಟ್ರಾ ಮಾರ್ಟಿಕ್‌ರನ್ನು 4-6, 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಫ್ರೆಂಚ್ ಓಪನ್‌ನಲ್ಲಿ ಮ್ಯಾಟ್ರಿಕ್‌ರ ಕನಸಿನ ಓಟಕ್ಕೆ ಬ್ರೇಕ್ ಹಾಕಿದರು. ಕ್ವಾಲಿಫೈಯರ್ ಸುತ್ತಿನ ಮೂಲಕ ಟೂರ್ನಿಯ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ವಿಶ್ವದ ನಂ.290ನೆ ಆಟಗಾರ್ತಿ ಮ್ಯಾಟ್ರಿಕ್ ಮೂರನೆ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪುವ ಉತ್ತಮ ಅವಕಾಶ ಹೊಂದಿದ್ದರು. ಆದರೆ, ಸ್ವಿಟೋಲಿನಾ ಎರಡು ಹಾಗೂ 3ನೆ ಸೆಟ್‌ನ್ನು ಕ್ರಮವಾಗಿ 6-3, 7-5 ಅಂತರದಿಂದ ಗೆದ್ದುಕೊಂಡು ಮುಂದಿನ ಸುತ್ತಿಗೇರಿದರು.

ವಿಂಬಲ್ಡನ್‌ನಲ್ಲಿ ಭಾಗವಹಿಸುವ ನನ್ನ ಯೋಜನೆಯಲ್ಲಿ ಬದಲಾವಣೆಯಿಲ್ಲ: ಜೊಕೊವಿಕ್

ಪ್ಯಾರಿಸ್,ಜೂ.5: ಲಂಡನ್‌ನಲ್ಲಿ ಶನಿವಾರ ನಡೆದ ಉಗ್ರರ ಅಟ್ಟಹಾಸಕ್ಕೆ ಏಳು ಮಂದಿ ಸಾವನ್ನಪ್ಪಿ, 48 ಮಂದಿ ಗಾಯಗೊಂಡಿರುವ ಘಟನೆಯ ಹೊರತಾಗಿಯೂ ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯಲ್ಲಿ ಭಾಗವಹಿಸುವ ನನ್ನ ಯೋಜನೆ ಹಾಗೂ ತಯಾರಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಾರೆ ಎಂದು ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್ ಸ್ಪಷ್ಟಪಡಿಸಿದ್ದಾರೆ.

‘‘ವಿಂಬಲ್ಡನ್‌ಗೆ ನನ್ನ ಯೋಜನೆಯಂತೆ ಎಲ್ಲವೂ ನಡೆಯುತ್ತಿದೆ. ನಾನು ಲಂಡನ್‌ಗೆ ನನ್ನ ಕುಟುಂಬ ಸದಸ್ಯರೊಂದಿಗೆ ತೆರಳಲು ಪ್ರಯತ್ನಿಸುವೆ. ನಾನು ಹಗಲು ಇಲ್ಲವೇ ರಾತ್ರಿ ವೇಳೆ ಯಾವ ಸಮಯದಲ್ಲಿ ಹೋಗುತ್ತೇವೆಂಬ ಪ್ರಜ್ಞೆ ಇರಬೇಕು. ಕೆಲವೊಂದು ಅಹಿತಕರ ಘಟನೆಯನ್ನು ಊಹಿಸಲು ಸಾಧ್ಯವಾಗುವುದಿಲ್ಲ. ವಿಶ್ವದ ಅತ್ಯಂತ ದೊಡ್ಡ ಹಾಗೂ ಪ್ರಮುಖ ನಗರವೊಂದರಲ್ಲಿ, ನಗರದ ಜನಪ್ರಿಯ ಸ್ಥಳಗಳಲ್ಲಿ ಇಂತಹ ಭಯೋತ್ಪಾದಕ ದಾಳಿ ನಡೆಯುತ್ತಿರುವುದು ತುಂಬಾ ಆತಂಕದ ವಿಷಯ’’ ಎಂದು ಜೊಕೊವಿಕ್ ಅಭಿಪ್ರಾಯಪಟ್ಟರು.

ಈ ವರ್ಷದ ಮೂರನೆ ಗ್ರಾನ್‌ಸ್ಲಾಮ್ ಟೂರ್ನಿ ವಿಂಬಲ್ಡನ್ ಜುಲೈ 3 ರಿಂದ 16ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News