×
Ad

ಫ್ರೆಂಚ್ ಓಪನ್‌: ಜೊಕೊವಿಕ್‌ಗೆ ಡೊಮಿನಿಕ್ ಶಾಕ್!

Update: 2017-06-07 23:31 IST

ಪ್ಯಾರಿಸ್, ಜೂ.7: ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಸ್ಟ್ರೀಯದ ಆಟಗಾರ ಡೊಮಿನಿಕ್ ಥೀಮ್ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್‌ರನ್ನು ಮಣಿಸುವ ಮೂಲಕ ಭಾರೀ ಆಘಾತ ನೀಡಿದ್ದಾರೆ.

 ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಆರನೆ ಶ್ರೇಯಾಂಕದ ಆಟಗಾರ ಡೊಮಿನಿಕ್ ವಿಶ್ವದ ನಂ.2ನೆ ಆಟಗಾರ ಜೊಕೊವಿಕ್ ವಿರುದ್ಧ 7-6(7/5), 6-3, 6-0 ಸೆಟ್‌ಗಳ ಅಂತರದಿಂದ ಜಯಭೇರಿ ಬಾರಿಸಿದರು. ಜೊಕೊವಿಕ್ ಏಳು ವರ್ಷಗಳ ಬಳಿಕ ಪ್ಯಾರಿಸ್ ಓಪನ್‌ನಲ್ಲಿ ಬೇಗನೆ ಸೋತು ನಿರ್ಗಮಿಸಿದ್ದಾರೆ.

 ಜೊಕೊವಿಕ್ ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರಲ್ಲಿ ನೇರ ಸೆಟ್‌ಗಳಿಂದ ಸೋತಿದ್ದಾರೆ. ಕಳೆದ ವರ್ಷ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಜಯಿಸಿದ್ದ ಜೊಕೊವಿಕ್ ಎಲ್ಲ ನಾಲ್ಕು ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿ ಅಪೂರ್ವ ಸಾಧನೆ ಮಾಡಿದ್ದರು.

2005ರ ಯುಎಸ್ ಓಪನ್ ನಂತರ ಹೀನಾಯವಾಗಿ ಸೋತಿರುವ ಜೊಕೊವಿಕ್ ಆರು ವರ್ಷಗಳ ಬಳಿಕ ವಿಶ್ವದ ಅಗ್ರ-2ನೆ ಸ್ಥಾನವನ್ನು ಕಳೆದುಕೊಂಡಿದ್ದಾರೆ.

 ಜೊಕೊವಿಕ್‌ಗೆ ಶಾಕ್ ನೀಡಿರುವ ಡೊಮಿನಿಕ್ ಸೆಮಿ ಫೈನಲ್ ಸುತ್ತಿನಲ್ಲಿ ಸ್ಪೇನ್‌ನ 9 ಬಾರಿಯ ಪ್ಯಾರಿಸ್ ಚಾಂಪಿಯನ್ ರಫೆಲ್ ನಡಾಲ್‌ರನ್ನು ಎದುರಿಸಲಿದ್ದಾರೆ. ‘‘ನೊವಾಕ್‌ರನ್ನು ಮೊದಲ ಬಾರಿ ಸೋಲಿಸಿ ಫ್ರೆಂಚ್ ಓಪನ್‌ನಲ್ಲಿ ಮತ್ತೊಮ್ಮೆ ಸೆಮಿ ಫೈನಲ್‌ಗೆ ತಲುಪುವುದು ನನ್ನ ಕನಸಾಗಿತ್ತು’’ ಎಂದು ಡೊಮಿನಿಕ್ ಸಂಭ್ರಮ ವ್ಯಕ್ತಪಡಿಸಿದರು. 2016ರಲ್ಲಿ ಪ್ಯಾರಿಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಡೊಮಿನಿಕ್ ಅವರು ಜೊಕೊವಿಕ್ ವಿರುದ್ಧ ನೇರ ಸೆಟ್‌ಗಳಿಂದ ಸೋತಿದ್ದರು. ಇದೀಗ ಆ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡರು.

ನಡಾಲ್ ಸೆಮಿಫೈನಲ್‌ಗೆ ಪ್ಯಾರಿಸ್, ಜೂ.7: ಸ್ಪೇನ್‌ನ ರಫೆಲ್ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಬುಧವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಎದುರಾಳಿ ಸ್ಪೇನ್‌ನ ಪಾಬ್ಲೊ ಕರ್ರೆನೊ ಬುಸ್ಟಾ ಆಟ ಆರಂಭವಾಗಿ ಒಂದು ಗಂಟೆ ಕಳೆಯುವಷ್ಟರಲ್ಲಿ ಗಾಯಗೊಂಡು ಪಂದ್ಯದಿಂದ ಹಿಂದೆ ಸರಿದರು.

ಪಾಬ್ಲೊ ಗಾಯಗೊಂಡು ನಿವೃತ್ತಿಯಾದಾಗ ನಡಾಲ್ 6-2, 2-0 ಮುನ್ನಡೆಯಲ್ಲಿದ್ದರು. ಮೊದಲ ಸೆಟ್‌ನಲ್ಲಿ ಸೋತಿದ್ದ ಪಾಬ್ಲೊ ಎರಡನೆ ಸೆಟ್‌ನಲ್ಲಿ ಆಡುತ್ತಿದ್ದಾಗ ಉದರ ನೋವು ಕಾಣಿಸಿಕೊಂಡು ದೀರ್ಘ ಸಮಯ ಚಿಕಿತ್ಸೆಯನ್ನು ಪಡೆದರು. ಆದರೆ, ನೋವು ಕಡಿಮೆಯಾಗದ ಕಾರಣ ಪಂದ್ಯವನ್ನು ಮುಂದುವರಿಸದೇ ಇರಲು ನಿರ್ಧರಿಸಿದರು.

31ರ ಹರೆಯದ ನಡಾಲ್ ಫ್ರೆಂಚ್ ಓಪನ್‌ನಲ್ಲಿ 10ನೆ ಬಾರಿ ಸೆಮಿ ಫೈನಲ್‌ಗೆ ತಲುಪಿ ತನ್ನ ದಾಖಲೆ ಮುಂದುವರಿಸಿದರು. 10ನೆ ಫ್ರೆಂಚ್ ಓಪನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಡಾಲ್ ಮುಂದಿನ ಸುತ್ತಿನಲ್ಲಿ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ.

ಟೈಮಿಯಾ, ಜೆಲೆನಾ ಸೆಮಿ ಫೈನಲ್‌ಗೆ

ಪ್ಯಾರಿಸ್, ಜೂ.7: ಸ್ವಿಸ್‌ನ ಟೈಮಿಯಾ ಬಾಸಿನ್‌ಸ್ಕಿ ಹಾಗೂ ಲಾಟ್ವಿಯಾದ ಜೆಲೆನಾ ಒಸ್ಟಾಪೆಂಕೊ ಫ್ರೆಂಚ್ ಓಪನ್‌ನ ವನಿತೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ.

  ಇಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 30ನೆ ಶ್ರೇಯಾಂಕದ ಟೈಮಿಯಾ ಫ್ರಾನ್ಸ್‌ನ ಕ್ರಿಸ್ಟಿನಾ ಮ್ಲಾಡೆನೊವಿಕ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿದರು. ಎರಡನೆ ಬಾರಿ ಸೆಮಿ ಫೈನಲ್‌ಗೆ ತಲುಪಿದರು. 27ರ ಹರೆಯದ ಆಟಗಾರ್ತಿ ಟೈಮಿಯಾ 2015ರಲ್ಲಿ ಅಂತಿಮ-4ರ ಸುತ್ತು ತಲುಪಿದ್ದರು. ಟೈಮಿಯಾ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಪಡೆಯಲು ಮುಂದಿನ ಸುತ್ತಿನಲ್ಲಿ ಶ್ರೇಯಾಂಕರಹಿತ ಲಾಟ್ವಿಯದ ಜೆಲೆನಾ ಒಸ್ಟಾಪೆಂಕೊರನ್ನು ಎದುರಿಸಲಿದ್ದಾರೆ.

ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಒಸ್ಟಾಪೆಂಕೊ ಅವರು ಡೆನ್ಮಾರ್ಕ್‌ನ 11ನೆ ಶ್ರೇಯಾಂಕದ ಕರೊಲಿನ್ ವೋಝ್ನಿಯಾಕಿ ಅವರನ್ನು 4-6, 6-2, 6-2 ಸೆಟ್‌ಗಳಿಂದ ಮಣಿಸಿದ್ದಾರೆ.

ಮಂಗಳವಾರ ಇಲ್ಲಿ ನಡೆದ ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯಗಳು ವಿಳಂಬವಾಗಿ ಕೊನೆಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News