ಐಎಸ್‌ಎಲ್,ಐ-ಲೀಗ್ ವಿಲೀನಕ್ಕೆ ಮೂಡದ ಒಮ್ಮತ

Update: 2017-06-07 18:29 GMT

ಹೊಸದಿಲ್ಲಿ, ಜೂ.7: ಐಎಸ್‌ಎಲ್ ಹಾಗೂ ಐ-ಲೀಗ್ ವಿಲೀನಕ್ಕೆ ಸಂಬಂಧಿಸಿ ಕೌಲಾಲಂಪುರದಲ್ಲಿ ನಡೆದಿದ್ದ ಪ್ರಮುಖ ಸಭೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಏಷ್ಯನ್ ಫುಟ್ಬಾಲ್ ಕಾನ್ಫಡರೇಶನ್(ಎಎಫ್‌ಸಿ)ಮಲೇಷ್ಯಾದ ರಾಜಧಾನಿಯಲ್ಲಿ ಭಾರತೀಯ ಕ್ಲಬ್ ಫುಟ್ಬಾಲ್‌ಗೆ ಹೊಸ ರೂಪ ನೀಡಲು ಮಹತ್ವದ ಸಭೆ ಕರೆದಿತ್ತು. ಎಎಫ್‌ಸಿ ಕಾರ್ಯದರ್ಶಿ ಡಾಟೊ ವಿಂಡ್ಸರ್ ಜಾನ್ ಅಧ್ಯಕ್ಷತೆಯ ಸಭೆಯಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಪ್ರತಿನಿಧಿಗಳು, ಕ್ರೀಡಾ ಸಚಿವಾಲಯ, ಐ-ಲೀಗ್ ಹಾಗೂ ಐಎಸ್‌ಎಲ್ ಕ್ಲಬ್‌ಗಳು, ವಿಶ್ವ ಜಾಗತಿಕ ಫುಟ್ಬಾಲ್ ಸಂಸ್ಥೆ ಫಿಫಾ, ಆಟಗಾರರ ಪ್ರತಿನಿಧಿಗಳು ಹಾಗೂ ಎಎಫ್‌ಸಿ ಭಾಗವಹಿಸಿತ್ತು.

ಸಭೆಯಲ್ಲಿ ಹಲವು ವಿಷಯ ಚರ್ಚೆಗೆ ಬಂದಿದ್ದವು. ಎರಡು ಲೀಗ್‌ಗಳ ವಿಲೀನ ಹಾಗೂ ಐಎಸ್‌ಎಲ್‌ಗೆ ದೇಶದ ಪ್ರಮುಖ ಲೀಗ್ ಸ್ಥಾನಮಾನ ನೀಡುವುದಕ್ಕೆ ಒಮ್ಮತ ಮೂಡಲಿಲ್ಲ. ಐಎಸ್‌ಎಲ್‌ಗೆ ಎಎಫ್‌ಸಿ ಕಪ್ ಕಾಂಟಿನೆಂಟೆಲ್ ಪ್ಲೇ-ಆಫ್‌ನಲ್ಲಿ ಸ್ಥಾನ ನೀಡಲು ಎಎಫ್‌ಸಿ ನಿರಾಸಕ್ತಿ ತೋರಿದೆ.

ಲೀಗ್‌ನೊಂದಿಗೆ ಐ-ಲೀಗ್‌ನ್ನು ನಡೆಸುವ ಕುರಿತು ಐಎಸ್‌ಎಲ್ ಪ್ರಸ್ತಾವವಿಟ್ಟಿದೆ. ಮೋಹನ್ ಬಗಾನ್ ಹಾಗೂ ಈಸ್ಟ್ ಬಂಗಾಳದ ಪ್ರತಿನಿಧಿಗಳು ಈ ಪ್ರಸ್ತಾವಕ್ಕೆ ಒಲವು ತೋರಿಸಿದ್ದು, ಸಂಯುಕ್ತ ಅಗ್ರ ಡಿವಿಜನ್ ಲೀಗ್‌ನಿಂದಾಗಿ ರಾಷ್ಟ್ರೀಯ ತಂಡದ ಪ್ರದರ್ಶನಮಟ್ಟ ಹೆಚ್ಚುವ ಜೊತೆಗೆ ಆಟಗಾರರು ಹಾಗೂ ಕೋಚ್‌ಗಳ ಬೆಳವಣಿಗೆ ಸಾಧ್ಯವೆಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News