ಫ್ರೆಂಚ್ ಓಪನ್: ಸೆಮಿಫೈನಲ್‌ನಲ್ಲಿ ಮರ್ರೆಗೆ ವಾವ್ರಿಂಕ ಎದುರಾಳಿ

Update: 2017-06-08 18:11 GMT

ಪ್ಯಾರಿಸ್, ಜೂ.8: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಐದನೆ ಬಾರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

 ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರಿಟನ್‌ನ ಮರ್ರೆ ಜಪಾನ್‌ನ 8ನೆ ಶ್ರೇಯಾಂಕದ ಕೀ ನಿಶಿಕೊರಿ ಅವರನ್ನು 2-6, 6-1, 7-6(7/0), 6-1 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಶರಣಾಗಿ ರನ್ನರ್-ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಮರ್ರೆ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸೆಮಿ ಫೈನಲ್‌ನಲ್ಲಿ ಸ್ವಿಸ್‌ನ ಸ್ಟಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ.

ಮರ್ರೆ 1985ರ ಬಳಿಕ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಜಿಮ್ಮಿ ಕೊನರ್ಸ್‌ ಈ ಮೊದಲು ಈ ಸಾಧನೆ ಮಾಡಿದ್ದರು.

 ಕಳೆದ ವರ್ಷ ನಡೆದ ಯುಎಸ್ ಓಪನ್‌ನಲ್ಲಿ ನಿಶಿಕೊರಿ ಅವರು ಮರ್ರೆ ಅವರನ್ನು ಮಣಿಸಿದ್ದರು. ಮೊದಲ ಸೆಟ್‌ನ್ನು 6-2 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಎರಡನೆ ಸೆಟ್‌ನ್ನು 6-1 ರಿಂದ ಗೆದ್ದುಕೊಂಡ ಮರ್ರೆ ತಿರುಗೇಟು ನೀಡಿದರು. ಮೂರನೆ ಸೆಟ್ ಟೈ-ಬ್ರೇಕ್‌ನಲ್ಲಿ ಅಂತ್ಯಗೊಂಡಿತು.

‘‘ನಾನು ಈತನಕ ಟೂರ್ನಿಯಲ್ಲಿ ಅಪೂರ್ವ ಪ್ರದರ್ಶನ ನೀಡಿದ್ದೇನೆ. ಕಳೆದ ವರ್ಷ ಆವೆಮಣ್ಣಿನಲ್ಲಿ ಉತ್ತಮ ಪ್ರದರ್ಶನ ನೀಡಿ ನಿಶಿಕೊರಿಯನ್ನು ಸೋಲಿಸಿದ್ದೆ. ಪ್ಯಾರಿಸ್ ಓಪನ್‌ನಲ್ಲಿ ಆಡುವುದು ಸುಲಭಸಾಧ್ಯವಲ್ಲ’’ ಎಂದು ಮರ್ರೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News