×
Ad

ಫ್ರೆಂಚ್ ಓಪನ್‌: ಪುರುಷರ ಸಿಂಗಲ್ಸ್: ವಾವ್ರಿಂಕ ಫೈನಲ್‌ಗೆ

Update: 2017-06-09 23:37 IST

ಪ್ಯಾರಿಸ್,ಜೂ.9: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಅವರನ್ನು ಮ್ಯಾರಥಾನ್ ಪಂದ್ಯದಲ್ಲಿ ಐದು ಸೆಟ್‌ಗಳ ಅಂತರದಿಂದ ಮಣಿಸಿದ ಸ್ವಿಸ್‌ನ ಸ್ಟಾನ್ ವಾವ್ರಿಂಕ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

 ಇಲ್ಲಿ ಶುಕ್ರವಾರ 4 ಗಂಟೆ, 34 ನಿಮಿಷಗಳ ಕಾಲ ನಡೆದ ಮೊದಲ ಸಿಂಗಲ್ಸ್ ಸೆಮಿಫೈನಲ್ ಸೆಣಸಾಟದಲ್ಲಿ ಯುಎಸ್ ಓಪನ್ ಚಾಂಪಿಯನ್ ವಾವ್ರಿಂಕ ಬ್ರಿಟನ್‌ನ ಮರ್ರೆ ಅವರನ್ನು 6-7(6/8), 6-3, 5-7, 7-6(7/3), 6-1 ಸೆಟ್‌ಗಳ ಅಂತರದಿಂದ ಮಣಿಸಿದರು. 44 ವರ್ಷಗಳ ಬಳಿಕ ಫ್ರೆಂಚ್ ಓಪನ್ ಫೈನಲ್‌ಗೆ ತಲುಪಿದ ಹಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

1973ರಲ್ಲಿ ತನ್ನ 33ರ ಪ್ರಾಯದಲ್ಲಿ ಫೈನಲ್‌ಗೆ ತಲುಪಿದ್ದ ನಿಕಿ ಪಿಲಿಕ್ ರನ್ನರ್-ಅಪ್ ಪ್ರಶಸ್ತಿ ಪಡೆದಿದ್ದರು.

ಕಳೆದ ವರ್ಷ ಇದೇ ಟೂರ್ನಿಯಲ್ಲಿ ಸೆಮಿಫೈನಲ್ ಸುತ್ತಿನಲ್ಲಿ ಮರ್ರೆ ವಿರುದ್ಧ ಸೋತಿದ್ದ ವಾವ್ರಿಂಕ ಸೋಲಿಗೆ ತಕ್ಕ ಸೇಡು ತೀರಿಸಿಕೊಂಡರು. ವಾವ್ರಿಂಕ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ಮತ್ತೊಂದು ಸೆಮಿಫೈನಲ್‌ನಲ್ಲಿ ಸೆಣಸಾಡಲಿರುವ ರಫೆಲ್ ನಡಾಲ್ ಅಥವಾ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ.

ವಾವ್ರಿಂಕ ನಾಲ್ಕನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಮರ್ರೆಗೆ 1935ರ ಬಳಿಕ ಪ್ಯಾರಿಸ್‌ನಲ್ಲಿ ಪ್ರಶಸ್ತಿ ಜಯಿಸಿದ ಬ್ರಿಟನ್‌ನ ಮೊದಲ ಆಟಗಾರ ಎನಿಸಿಕೊಳ್ಳಲು ಇನ್ನಷ್ಟು ಕಾಲ ಕಾಯಬೇಕಾಗಿದೆ. 

ಫ್ರೆಂಚ್ ಓಪನ್: ಹಾಲೆಪ್-ಒಸ್ಟಾಪೆಂಕೊ ಫೈನಲ್ ಫೈಟ್

ಪ್ಯಾರಿಸ್, ಜೂ.9: ರೊಮಾನಿಯದ ಸಿಮೊನಾ ಹಾಲೆಪ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಜೆಲೆನಾ ಒಸ್ಟಾಪೆಂಕೊರನ್ನು ಎದುರಿಸಲಿದ್ದಾರೆ.

ಇಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಮೂರನೆ ಶ್ರೇಯಾಂಕದ ಹಾಲೆಪ್ ಝೆಕ್‌ನ ಎರಡನೆ ಶ್ರೇಯಾಂಕದ ಕರೋಲಿನಾ ಪ್ಲಿಸ್ಕೋವಾರನ್ನು 6-4, 3-6, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ.

2014ರಲ್ಲಿ ಫೈನಲ್‌ಗೆ ತಲುಪಿದ್ದ ಹಾಲೆಪ್ ರಶ್ಯದ ಮರಿಯಾ ಶರಪೋವಾ ವಿರುದ್ಧ ಸೋತಿದ್ದರು. ಇದೀಗ ಫೈನಲ್‌ಗೆ ತಲುಪಿರುವ ಅವರು ಪ್ರಶಸ್ತಿಯ ಜೊತೆಗೆ ವಿಶ್ವದ ನಂ.1 ಸ್ಥಾನವನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

  ಮತ್ತೊಂದು ಸೆಮಿ ಫೈನಲ್‌ನಲ್ಲಿ ಟೈಮಿಯಾ ಬಾಸಿನ್‌ಸ್ಕಿ ಅವರನ್ನು 7-6(7/4), 3-6, 6-3 ಸೆಟ್‌ಗಳ ಅಂತರದಿಂದ ಮಣಿಸಿದ ಶ್ರೇಯಾಂಕರಹಿತ ಒಸ್ಟಾಪೆಂಕೊ ಪ್ರಮುಖ ಟೂರ್ನಿಯೊಂದರಲ್ಲಿ ಪ್ರಶಸ್ತಿ ಸುತ್ತಿಗೆ ತಲುಪಿದ ಲಾಟ್ವಿಯದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2015ರ ಸೆಮಿ ಫೈನಲಿಸ್ಟ್ ಬಾಸಿನ್‌ಸ್ಕಿ ಅವರನ್ನು ಮಣಿಸಿ ಮೊತ್ತ ಮೊದಲ ಬಾರಿ ಫ್ರೆಂಚ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ ಒಸ್ಟಾಪೆಂಕೊ ತನ್ನ 20ನೆ ಹುಟ್ಟುಹಬ್ಬ ಸಂದರ್ಭದಲ್ಲಿ ಗೆಲುವಿನ ಉಡುಗೊರೆ ಪಡೆದಿದ್ದಾರೆ.

ಒಸ್ಟಾಪೆಂಕೊ ಗ್ರಾನ್‌ಸ್ಲಾಮ್ ಟೂರ್ನಿಯೊಂದರಲ್ಲಿ ಫೈನಲ್‌ಗೆ ತಲುಪಿದ ಎರಡನೆ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡರು. 2009ರ ಯುಎಸ್ ಓಪನ್‌ನಲ್ಲಿ ಕಾರೊಲಿನ್ ವೋಝ್ನಿಯಾಕಿ ತನ್ನ 19ನೆ ಹರೆಯದಲ್ಲಿ ಫೈನಲ್‌ಗೆ ತಲುಪಿ ರನ್ನ್ರರ್-ಅಪ್ ಪ್ರಶಸ್ತಿ ಪಡೆದಿದ್ದರು.

ಶನಿವಾರ ತಡರಾತ್ರಿ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಹಾಲೆಪ್-ಒಸ್ಟಾಪೆಂಕೊ ಹಣಾಹಣಿ ನಡೆಸಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸುವವರು ಮೊದಲ ಬಾರಿ ಫ್ರೆಂಚ್ ಓಪನ್ ಜಯಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News